ನಾಲ್ವಡಿ ಅವರ ಸೇವಾ ಮನೋಭಾವ ಎಲ್ಲರಿಗೂ ಆದರ್ಶ : ಸಂಸದ ಯದುವೀರ್

ಮೈಸೂರು ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ದಲ್ಲಿ ಒಡೆಯರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,  ಸಿ.ಎನ್. ಮಂಜೇಗೌಡ,  ಜಿ. ಲಕ್ಷ್ಮೀಕಾಂತ್ ರೆಡ್ಡಿ, ಡಾ. ಬಿ.ಎಸ್. ಮಂಜುನಾಥ ಹಾಗೂ ಇತರರು ಇದ್ದರು.
ಮೈಸೂರು ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮ ದಲ್ಲಿ ಒಡೆಯರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿ.ಎನ್. ಮಂಜೇಗೌಡ, ಜಿ. ಲಕ್ಷ್ಮೀಕಾಂತ್ ರೆಡ್ಡಿ, ಡಾ. ಬಿ.ಎಸ್. ಮಂಜುನಾಥ ಹಾಗೂ ಇತರರು ಇದ್ದರು.
Published on
ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವಾ ಮನೋಭಾವ ನಮಗೆಲ್ಲರಿಗೂ ಆದರ್ಶ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ನಗರ ಪಾಲಿಕೆ ಹಾಗೂ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸುತ್ತಾ ಬರುತ್ತಿದೆ. ಅವರ ಸಾಧನೆ ಮತ್ತು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದರು.
ಕರ್ನಾಟಕವು ಒಂದು ಪ್ರಗತಿಪರ ರಾಜ್ಯವಾಗಿ ಗುರುತಿಸಿಕೊಂಡಿರುವುದಕ್ಕೆ ಅನೇಕ ನಾಯಕರ ಕೊಡುಗೆ ಇದೆ. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಧನೆಗಳು ಅತ್ಯಂತ ಪ್ರಮುಖವಾದವು. ಅವರ ಈ ಸಾಧನೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಸುವರ್ಣ ಮೈಸೂರಿನಂತೆ ಅಭಿವೃದ್ಧಿ ಹೊಂದಿದ ಕರ್ನಾಟಕ ನಿರ್ಮಿಸುವುದೇ ನಾಲ್ವಡಿ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಅವರ ಮೌಲ್ಯಗಳನ್ನು ಮತ್ತು ತತ್ವಗಳನ್ನು ಮುಂಬರುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.
ಲೇಖಕರು ಸಿದ್ದಸ್ವಾಮಿ ಮಾತನಾಡಿ, ನಾಲ್ವಡಿ ಅವರಿಗೆ ಬನಾರಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ದೊರೆತ್ತಿದೆ. ಹಾಗಾಗಿ ಅವರನ್ನು ರಾಜರ್ಷಿ ಡಾ. ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸಂಬೋಧಿಸುವುದು ಹೆಚ್ಚು ಸೂಕ್ತ ಎಂದರು.
ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಆರಂಭವಾಗಿ ಪ್ರಜಾಪ್ರಭುತ್ವದ ಅಂಕುರಾರ್ಪಣೆಯಾಯಿತು. ಇದನ್ನು ಮುಂದುವರಿಸಿದ ನಾಲ್ವಡಿಯವರು 1907ರಲ್ಲಿ ನ್ಯಾಯ ವಿಧಾಯಕ ಸಭೆಯನ್ನು ಅಸ್ತಿತ್ವಕ್ಕೆ ತಂದರು ಎಂದು ಸ್ಮರಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮೀಸಲಾತಿಗೆ ಅಡಿಪಾಯ ಹಾಕುವ ಮೊದಲೇ, ನಾಲ್ವಡಿ ಅವರು 1918 ರಲ್ಲಿ ಮಿಲ್ಲರ್ ಸಮಿತಿ ರಚಿಸಿ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಆಡಳಿತದಲ್ಲಿ ನ್ಯಾಯ ಒದಗಿಸಿದರು. ನಾಲ್ವಡಿಯವರ ಕೊಡುಗೆಗಳು ಅಪಾರವಾಗಿದ್ದು, ಅವರ ಜಯಂತಿಯು ಮೈಸೂರಿನ ಹಾಗೂ ಕರ್ನಾಟಕದ ಮನೆಮನೆಯ ಹಬ್ಬವಾಗಿ ಆಚರಿಸಲ್ಪಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಕೆ.ಆರ್.ಎಸ್ ಅಣೆಕಟ್ಟೆ ಕಟ್ಟುವ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾದಾಗ, ಅವರು ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಅಣೆಕಟ್ಟನ್ನು ಪೂರ್ಣಗೊಳಿಸಿದರು. ಹಾಗಾಗಿ ಅವರ ತ್ಯಾಗವನ್ನು ಜನರು ಸದಾ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ರಾಜಕಾರಣಿಗಳು ಸರ್ಕಾರದ ಹಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತಮ್ಮ ಹೆಸರನ್ನು ಹಾಕಿಸಿಕೊಳ್ಳುತ್ತಾರೆ ಹಾಗೂ ಅದನ್ನು ಚುನಾವಣೆಯ ಪ್ರಚಾರವಾಗಿ ಬಳಸಿಕೊಳ್ಳುತ್ತಾರೆ. ಆದರೆ ಒಡೆಯರ್ ಅವರು ಉಕ್ಕಿನ ಕಾರ್ಖಾನೆ ಪ್ರಾರಂಭಿಸಿ ಅದಕ್ಕೆ ವಿಶ್ವೇಶ್ವರಯ್ಯ ಅವರ ಹೆಸರು ಇಟ್ಟರು ಎಂದು ಹೇಳಿದರು.
ಇಡೀ ವಿಶ್ವದಲ್ಲೇ ಮೈಸೂರು ಮೆಡಿಕಲ್ ಕಾಲೇಜು ತನ್ನದೇ ಆದ ಇತಿಹಾಸ ಹೊಂದಿದೆ. ಇದನ್ನು ನಾಲ್ವಡಿ ಒಡೆಯರ್ ಅವರು ಕಟ್ಟಿದ್ದರು ಎಂಬುದು ಅಲ್ಲಿ ಓದಿದವರಿಗೆ ಮಾತ್ರ ತಿಳಿದಿದೆ. ಇಂತಹ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಪ್ರೊ. ಮಸೂದ್ ಸಿರಾಜ್, ಕುಪ್ಪೆ ನಾಗರಾಜ್, ಎಂ.ಎಸ್.ವೇದ, ಗೀತಾ ಮೋಂಟಡ್ಕ, ದಿನೇಶ್ ಚಮ್ಮಾಳಿಗೆ, ಹುತ್ತೂರು ಬಿಸಿಲನಾಯ್ಕ, ಕೈಲಾಸ್ ಮೂರ್ತಿ, ಸೋಮಶೇಖರ್ ಬಿಸಿಲ್ವಾಡಿ, ಡಾ.ಎಸ್.ಎನ್. ಸ್ವಾಮಿಗೌಡ, ಲೈಕ್ ಅಹಮದ್ ಖಾನ್, ಮಹೇಶ್ ಭಗೀರಥ, ಬನ್ನೂರು ಕೆ. ರಾಜು, ಪಂಡಿತ್ ವೀರಭದ್ರಯ್ಯ ಯರಗಲ್, ಪಂಡಿತ್ ರಮೇಶ್ ದನ್ನೂರು, ಡಾ. ಸುಜಯ್ ಕುಮಾರ್, ಕೆ.ಎಸ್. ಹಸನ್ ಸಾಬ್, ಡಾ.ಗುರು ಬಸವರಾಜು, ಹಿಮಾಂಶು, ರಿಯಾಜ್ ಅಹಮದ್, ಮಹದೇವಯ್ಯ, ಎನ್.ಆರ್. ನಾಗೇಶ್, ಶಂಭುಲಿಂಗಸ್ವಾಮಿ, ಆರ್.ಎಸ್. ದೊಡ್ಡಣ್ಣ, ಬಿ.ಎ. ಶಿವಶಂಕರ್, ಎಚ್.ಕೆ. ದ್ವಾರಕನಾಥ್, ಪ್ರಗತಿ ಗೋಪಾಲಕೃಷ್ಣ, ಜಿ. ಜಯಂತ್, ಸ್ವರ ಸಂಕುಲ ಹಾಗೂ ಮೈಸೂರು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ (ಮೆಸ್ಕೋ) ಅವರಿಗೆ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್, ಮಾಜಿ ಮೇಯರ್ ಪುರುಷೋತ್ತಮ್, ಸಾಮಾಜಿಕ ಕಾರ್ಯಕರ್ತ ಸೋಮಯ್ಯ ಮಲೆಯೂರು ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net