ಮೈಸೂರಿನ ವಿವೇಕ ಸ್ಮಾರಕ : ಪ್ರಧಾನಿ ಮೋದಿಯಿಂದ ಆ.1 ರಂದು ಉದ್ಘಾಟನೆ

 ಉದ್ಘಾಟನೆಗೆ ಸಜ್ಜಾಗಿರುವ ವಿವೇಕ ಸ್ಮಾರಕ
ಉದ್ಘಾಟನೆಗೆ ಸಜ್ಜಾಗಿರುವ ವಿವೇಕ ಸ್ಮಾರಕ
Published on
ಮೈಸೂರು: ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಿರುವ ನೂತನ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ-ವಿವೇಕ ಸ್ಮಾರಕ’ವನ್ನು ಆ.1 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ನಗರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಹೇಳಿದರು.
ಸ್ವಾಮಿ ವಿವೇಕಾನಂದರು 1892ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭ 10ನೇ ಚಾಮರಾಜೇಂದ್ರ ಒಡೆಯರ್ ಅವರು ಸ್ವಾಮಿ ವಿವೇಕಾನಂದ ಅವರನ್ನು ಸತ್ಕರಿಸಿದ್ದರು. ಅಮೆರಿಕದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಸ್ವಾಮಿ ವಿವೇಕಾನಂದ ರಿಗೆ ಮೈಸೂರು ಮಹಾರಾಜರು ಆರ್ಥಿಕ ನೆರವು ನೀಡಿದ್ದರು. ಮೈಸೂರು ಭೇಟಿ ಸಂದರ್ಭ ನಿರಂಜನ ಮಠದಲ್ಲಿ ಅವರು ಉಳಿದಿದ್ದರು. ಈ ಮಠದ ಆವರಣದಲ್ಲಿ ಇದೀಗ ವಿವೇಕ ಸ್ಮಾರಕ ನಿರ್ಮಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2010ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ರಾಷ್ಟ್ರೀಯ ಸಮಿತಿಯು ದೇಶಾದ್ಯಂತ ಸ್ವಾಮಿ ವಿವೇಕಾನಂ ದರಿಗೆ ಸಂಬಂಧಿಸಿದ ಸ್ಮಾರಕ ನಿರ್ಮಿಸಲು ತೀರ್ಮಾನ ಕೈಗೊಂಡಿತ್ತು. ಅದೇ ರೀತಿ ಸ್ವಾಮಿ ವಿವೇಕಾನಂದರು ಉಳಿದುಕೊಂಡಿದ್ದ ನಿರಂಜನ ಮಠ ಇದೀಗ ಸ್ಮಾರಕವಾಗಿ ರೂಪುಗೊಂಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 3.30ಕ್ಕೆ ವಿವೇಕ ಸ್ಮಾರಕ ಉದ್ಘಾಟಿಸುವರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಾಸಕ ಕೆ. ಹರೀಶ್ ಗೌಡ ಭಾಗವಹಿಸಲಿದ್ದಾರೆ. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ವಿವೇಕ ಸ್ಮಾರಕ ಉದ್ಘಾಟನೆಗೂ ಮುನ್ನ ಸ್ಮಾರಕ ಆವರಣದಲ್ಲಿರುವ ಶಿವ ದೇವಾಲಯದಲ್ಲಿ ನರೇಂದ್ರ ಮೋದಿ ಪೂಜೆ ಸಲ್ಲಿಸಿ ಬಿಲ್ವ ವೃಕ್ಷದ ಸಸಿ ನೆಡುವರು. ನಂತರ ವಿವೇಕನಂದರು ತಂಗಿದ್ದ ಕೊಠಡಿಗೆ ಭೇಟಿ ನೀಡಿ ವಿವೇಕಾನಂದರಿಗೆ ಸಂಬಂಧಿಸಿದ ಪತ್ರ, ಚಿತ್ರಗಳನ್ನು ವೀಕ್ಷಿಸಿ ನಂತರ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾಂಜಲಿ ಸಲ್ಲಿಸುವರು. ಆ ನಂತರ ಒಂದೆರಡು ನಿಮಿಷಗಳ ಕಾಲ ಆ ಕೊಠಡಿಯಲ್ಲಿ ಧ್ಯಾನದಲ್ಲಿ ಭಾಗವಹಿಲಿದ್ದಾರೆ. ಇದಾದ ನಂತರ ವಿವೇಕ ಸ್ಮಾರಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಉದ್ಘಾಟನೆಯ ನಂತರ 3ನೇ ಮಹಡಿಯಲ್ಲಿರುವ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಹಾಗೂ ಶಾರದಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಬಳಿಕ ಆಂಪಿ ಥಿಯಟರ್‌ನಲ್ಲಿ ಕುಳಿತು ಮೂರು ನಿಮಿಷಗಳ ಕಾಲ ‘ಸ್ವಾಮಿ ವಿವೇಕಾನಂದ ಇನ್ ಮೈಸೂರು- ಆ್ಯಂಡ್ ವಿವೇಕ ಸ್ಮಾರಕ’ ಎಂಬ ವಿಡಿಯೋವನ್ನು ವೀಕ್ಷಿಸಲಿದ್ದಾರೆ ಎಂದು ಹೆಳಿದರು.
ಸಭಾ ಕಾರ್ಯಕ್ರಮ: ವಿವೇಕ ಸ್ಮಾರಕ ಉದ್ಘಾಟನೆಯ ಸಭಾ ಕಾರ್ಯಕ್ರಮವನ್ನು ಸಂಜೆ 4.30ಕ್ಕೆ ರಾಮಕೃಷ್ಣ ವಿದ್ಯಾಶಾಲಾ ಸ್ಟೇಡಿಯಂನಲ್ಲಿ ಆಯೋಜಿಸ ಲಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಕೆ. ಹರೀಶ್ ಗೌಡ ಭಾಗವಹಿಸಲಿದ್ದಾರೆ. ಬೇಲೂರಿನ ರಾಮಕೃಷ್ಣ ಮಿಷನ್‌ನ ಅಧ್ಯಕ್ಷ ಸ್ವಾಮಿ ಗೌತಮಾನಂದಜೀ ಮಹಾರಾಜ್, ನಗರದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ರಾಮಕೃಷ್ಣರಿಗೆ ಆರತಿ ಬೆಳಗಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ವಿದ್ಯಾಶಾಲೆ ಕರೆಸ್ಪಾಂಡೆಂಟ್ ಸ್ವಾಮಿ ಯುಕ್ತೇಶಾನಂದ ಮಹಾರಾಜ್, ರಾಮಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೋರಲ್ ಆ್ಯಂಡ್ ಸ್ಪಿರುಚುಯಲ್ ಎಜುಕೇಷನ್‌ನ ಕರೆಸ್ಪಾಂಡೆಂಟ್ ಮಹಾಮೇಧಾನಂದ ಮಹಾರಾಜ್ ಇದ್ದರು.
3 ದಿನ ವಿವಿಧ ಕಾರ್ಯಕ್ರಮ: ಆ.1 ರಂದು ಸಂಜೆ 7ಕ್ಕೆ ವಿವೇಕ ಸ್ಮಾರಕದಲ್ಲಿ ‘ವಿವೇಕ ಸ್ಮಾರಕ- ಸ್ಮತಿ ಸಂಸ್ಮರಣೆ’ ಕಾರ್ಯಕ್ರಮ ನಡೆಯಲಿದೆ. ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆ.2 ರಂದು ವಿವೇಕ ಸ್ಮಾರಕದಲ್ಲಿ ಬೆಳಗ್ಗೆ 6.30 ರಿಂದ 7.30ರವರೆಗೆ ಉಷಾಕೀರ್ತನೆ ಮತ್ತು ಧ್ಯಾನ, ಬೆಳಗ್ಗೆ 8 ರಿಂದ 9ರವರೆಗೆ ಶಿವಮಂದಿರದಲ್ಲಿ ಪೂಜೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವೇಕ ಸ್ಮಾರಕ- ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅತಿಥಿಯಾಗಿ ಶಾಸಕ ಎಚ್.ಕೆ. ಪಾಟೀಲ್ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಶ್ರೀ ಶ್ರೀ ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೃತಜ್ಞತಾ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್, ನವದೆಹಲಿಯ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಶ್ರೀ ಸ್ವಾಮಿ ಸರ್ವಲೋಕಾನಂದಜೀ ಮಹಾರಾಜ್ ಭಾಗವಹಿಸಲಿದ್ದಾರೆ ಎಂದು ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾಹಿತಿ ನೀಡಿದರು.

ಪ್ರಧಾನಿಗೆ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮಕೃಷ್ಣ ಆಶ್ರಮದ ವತಿಯಿಂದ ಹೆಸರಾಂತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ ಸ್ವಾಮಿ ವಿವೇಕಾನಂದರ ಪ್ರತಿಮೆ ನೀಡಿ ಗೌರವಿಸಲಾಗುವುದು. ಇದರ ಜತೆಗೆ ಮೈಸೂರಿನ ಕೆಲವು ವಿಶೇಷತೆಗಳನ್ನು ಒಳಗೊಂಡ ಉಡುಗೊರೆಗಳನ್ನು ನೀಡಲಾಗುವುದು ಎಂದು ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಹೇಳಿದರು.

6 ಸಾವಿರ ಜನರಿಗೆ ಅವಕಾಶ

ಸಭಾ ಕಾರ್ಯಕ್ರಮದಲ್ಲಿ 6 ಸಾವಿರ ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಪಾಸ್ ಇದ್ದವರಿಗಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಕಾರ್ಯಕ್ರಮದಲ್ಲಿ ಎಸ್‌ಪಿಜಿ ಭದ್ರತೆ ನೀಡಲಾಗಿದೆ. ಹೀಗಾಗಿ ಪಾಸ್‌ಗಳನ್ನು ಸ್ಕಾೃನ್ ಮಾಡಿ ಒಳಗೆ ಬಿಡಲಾಗುವುದು. ಒಮ್ಮೆ ಸ್ಕಾೃನ್ ಮಾಡಿದ ಪಾಸ್ 2ನೇ ಬಾರಿ ಬಳಕೆ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಮಧ್ಯಾಹ್ನ 2.30ರೊಳಗೆ ಸ್ಥಳದಲ್ಲಿ ಆಸೀನರಾಗಿರಬೇಕು. ಆಶ್ರಮದಲ್ಲಿ ಆಧಾರ್ ನಂಬರ್ ನೀಡಿ ಪಾಸ್ ಪಡೆಯಬಹುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net