ಮೈಸೂರು ವಿವಿ 53.76 ಕೋಟಿ ರೂ. ಕೊರತೆ ಬಜೆಟ್ ಮಂಡನೆ

ಮೈಸೂರು ವಿಶ್ವವಿದ್ಯಾಲಯದ 2026-27ನೇ ಸಾಲಿನ ಬಜೆಟ್‌ಅನ್ನು ಗುರುವಾರ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ಮಂಡಿಸಿದರು. ಕುಲಪತಿ ಪ್ರೊ.ಎನ್.ಕೆ. ಲೋಕನಾಥ್,  ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜ ಹಾಗೂ ಇತರರು ಇದ್ದರು.
ಮೈಸೂರು ವಿಶ್ವವಿದ್ಯಾಲಯದ 2026-27ನೇ ಸಾಲಿನ ಬಜೆಟ್‌ಅನ್ನು ಗುರುವಾರ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ಮಂಡಿಸಿದರು. ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜ ಹಾಗೂ ಇತರರು ಇದ್ದರು.
Published on
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಣ ಮಂಡಳಿ ವಿಶೇಷ ಸಭೆಯಲ್ಲಿ 2026-27ನೇ ಸಾಲಿಗೆ ಒಟ್ಟು 53.76 ಕೋಟಿ ರೂ.ಮೊತ್ತದ ಕೊರತೆ ಬಜೆಟ್ ಮಂಡಿಸಲಾಯಿತು.
ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ಬಜೆಟ್ ಮಂಡಿಸಿದರು. ಸಣ್ಣಪುಟ್ಟ ಬದಲಾವಣೆಯೊಂದಿಗೆ ಅಂದಾಜು ಆಯವ್ಯಯಕ್ಕೆ ಅನುಮೋದನೆ ಪಡೆಯಲಾಯಿತು. ಸರ್ಕಾರದಿಂದ ವೇತನಾನುದಾನ 122.48 ಕೋಟಿ ರೂ., ಪಿಂಚಣಿ ಅನುದಾನ 100 ಕೋಟಿ ರೂ., ಅಭಿವೃದ್ಧಿ ಅನುದಾನ 10 ಕೋಟಿ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನಿರೀಕ್ಷಿಸಲಾದ ಅನುದಾನ 6.09 ಕೋಟಿ ರೂ. ಸೇರಿದಂತೆ ಒಟ್ಟು 238.57 ಕೋಟಿ ರೂ.ಗಳನ್ನು ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ. ವಿವಿಯ ಆಂತರಿಕ ಮೂಲಗಳಿಂದ 108.75 ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ. ಇದರ ಜತೆಗೆ ವಿವಿಯಲ್ಲಿರುವ 36.96 ಕೋಟಿ ರೂ. ದತ್ತಿ ಮೊತ್ತ ಸೇರಿದಂತೆ ಒಟ್ಟು 384.28 ಕೋಟಿ ರೂ. ಮೊತ್ತದ ಆದಾಯ ನಿರೀಕ್ಷಿಸಲಾಗುತ್ತಿದ್ದು, ಒಟ್ಟು 438.04 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಒಟ್ಟಾರೆ ಈ ಬಾರಿ 53.76 ಕೋಟಿ ರೂ. ಕೊರತೆ ಕಂಡು ಬಂದಿದೆ. ಸಭೆಯಲ್ಲಿ ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜ ಹಾಗೂ ಇತರರು ಇದ್ದರು.
ಪಿಂಚಣಿಗೆ ಹಣ ಇಲ್ಲ : ವಿವಿಯಲ್ಲಿ ಪ್ರಸ್ತುತ 1864 ಪಿಂಚಣಿ/ಕುಟಂಬ ಪಿಂಚಣಿದಾರರು ಮಾಸಿಕ ಪಿಂಚಣಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. 2026-27ನೇ ಸಾಲಿಗೆ ಪಿಂಚಣಿದಾರರ ಸಂಖ್ಯೆ 1906ಕ್ಕೆ ಏರಿಕೆಯಾಗಲಿದೆ. ಹಾಗಾಗಿ ಪಿಂಚಣಿ ಪಾವತಿಗೆ 171.45 ಕೋಟಿ ರೂ. ಅವಶ್ಯಕತೆ ಇದೆ. ಆದರೆ, ಸರ್ಕಾರ 100 ಕೋಟಿ ರೂ.ಮಾತ್ರ ನೀಡುವ ಹಿನ್ನೆಲೆಯಲ್ಲಿ 71.45 ಕೋಟಿ ರೂ. ಕೊರತೆ ಉಂಟಾಗಿದೆ ಎಂದು ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ತಿಳಿಸಿದರು.
ಪಿಂಚಣಿಗೆ ಹಣ ಹೊಂದಿಸುವ ವಿಚಾರದಲ್ಲಿ ಬೆಂಗಳೂರು ವಿವಿ ಮಾದರಿಯಾಗಿದೆ. ಪಿಂಚಣಿಗೋಸ್ಕರ ಕಾಲ ಕಾಲಕ್ಕೆ ಹಣ ತೆಗೆದಿಡಬೇಕು. ಪ್ರಸ್ತುತ ಎದುರಾಗಿರುವ ಪಿಂಚಣಿ ಕೊರತೆ ಸರಿದೂಗಿಸಲು ವೆಚ್ಚದದಲ್ಲಿ ಕಡಿತ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net