ಭೃಗು ಸರೋವರ ಚಾರಣ ಮಾಡಿದ ಮೈಸೂರು ತಂಡ

ಹಿಮಾಲಯದ ಭೃಗು ಪರ್ವತವನ್ನು ಏರಿ ಬಂದ ಮೈಸೂರಿನ ಸಾಹಸಿಗಳ  ತಂಡ
ಹಿಮಾಲಯದ ಭೃಗು ಪರ್ವತವನ್ನು ಏರಿ ಬಂದ ಮೈಸೂರಿನ ಸಾಹಸಿಗಳ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಮಳೆ, ಹಿಮಪಾತದ ನಡುವೆಯೂ ಸಾಹಸ ಮರೆದ ತಂಡ
  • ಯಶಶ್ವಿಯಾಗಿ 14,100 ಅಡಿ ಎತ್ತರವನ್ನು ಏರಿ ಭಾರತದ ಧ್ವಜ ಹಾರಾಟ
ಮೈಸೂರು:ಹತ್ತು ಮಹಿಳೆಯನ್ನು ಒಳಗೊಂಡ 19 ಜನರ ತಂಡ, ಹಿಮಾಲಯ ಪರ್ವತದಲ್ಲಿರುವ 14,100 ಅಡಿ ಎತ್ತರದ ‘ಭೃಗು ಸರೋವರ’ವನ್ನು ಅತ್ಯಂತ ಯಶಸ್ವಿಯಾಗಿ ಏರಿ ಬಂದಿದೆ.
ಮೈಸೂರು-ಬೆಂಗಳೂರಿನ ಈ ಸಾಹಸಿ ತಂಡ, ದುರ್ಗಮ ಪ್ರದೇಶ, ಹಿಮಪಾತದ ನಡುವೆಯೂ ಎದೆ ಗುಂದದೆ ಸಾಹಸ ಮೆರೆದಿದೆ. ಮೈಸೂರಿನ ಹಿರಿಯ ಅನುಭವಿ ಅಡ್ವೆಂಚರ್ ಟೈಗರ್ ಸೋಲಂಕಿ ನೇತೃತ್ವ ಹಾಗೂ ಅಮರ್‌ಚಂದ್ ಠಾಕೂರ್ ಮಾರ್ಗದಲ್ಲಿ ಈ ಸಾಹಸ ಕಾರ್ಯ ಮಾಡಿದೆ.
ಈ ಋತುವಿನ ಮೊದಲ ತಂಡ:
ಸಾಮಾನ್ಯವಾಗಿ ಪರ್ವತಾರೋಹಣಕ್ಕೆ ಮೇ ನಿಂದ ಅಕ್ಟೋಬರ್‌ನಲ್ಲಿ ಆರಂಭಗೊಳ್ಳುತ್ತದೆ. ಮೈಸೂರು-ಬೆಂಗಳೂರಿನ ಟೈಗರ್ ಅಡ್ವೆಂಚರ್ಸ್‌ ತಂಡ ಈ ಋತುವಿನಲ್ಲಿ ಪ್ರಥಮ ತಂಡವಾಗಿ ಭೃಗು ಸರೋವರ ಪರ್ವತವನ್ನು ಏರಿ ಸಾಧನೆ ತೋರಿದೆ.
‘ಏಕಾಂತಕ್ಕಾಗಿ ಏಕಾಂಗಿ’ ಘೋಷಣೆಯೊಂದಿಗೆ ಈ ತಂಡ, ಮೇ 1 ರಂದು ಹಿಮಾಚಲ ಪ್ರದೇಶದ ಗುಲಾಬಾ ಬಳಿಯ ರೋಹ್ತಾಂಗ್ ಪಾಸ್ ಹತ್ತಿರದ ಪೀರ್ ಪಂಜಾಲ್ ಶ್ರೇಣಿಯಲ್ಲಿ ಇರುವ ಈ ಭೃಗು ಸರೋವರವನ್ನು ಏರಲು ಆರಂಭಿಸಿತು. ಮಳೆ ಅದಾಗಲೇ ಆರಂಭಗೊಂಡಿದ್ದು, ಟ್ರಕ್ಕಿಂಗ್‌ಗೆ ಅಗಾಗ್ಗೆ ಅಡಚಣೆ ಉಂಟು ಮಾಡುತ್ತಿತ್ತು. ಆದರೂ ಸಾಹಸ ಮರೆದ ತಂಡ 14,100 ಅಡಿ ಎತ್ತರವನ್ನು ಏರಿ ಭಾರತದ ಧ್ವಜವನ್ನು ಹಾರಿಸಿದೆ.
ಪರ್ವತವನ್ನು ಇಳಿಯುವಾಗ ಹಿಮಪಾತ ಆರಂಭಗೊಂಡಿದ್ದರಿಂದ ಸಾಹಸಿಗಳು ಆತಂಕಗೊಂಡರು. ಒಂದೆಡೆ ಮಳೆ, ಮತ್ತೊಂದೆಡೆ ಹಿಮಪಾತದ ನಡುವೆ ಇಳಿಯುವಾಗ ಎಚ್ಚರ ತಪ್ಪದಂತೆ ಹಗ್ಗಗಳ ಸಹಾಯದಿಂದ ಎಲ್ಲರೂ ಸುರಕ್ಷಿತವಾಗಿ ಅವರೋಹಣ ಮಾಡಿದರು.
ಅಂತಿಮವಾಗಿ ಎಲ್ಲ ಪರ್ವತಾರೋಹಿಗಳೂ ಮೇ 9ರಂದು ಬಿಡಾರಕ್ಕೆ ಬೇಸ್ ಕ್ಯಾಂಪ್‌ಗೆ ಮರಳಿದರು.
ಪೂರ್ವ ತರಬೇತಿ:
ಪರ್ವತಾರೋಹಣಕ್ಕೂ ಮುನ್ನ ಸಾಹಸಯಾತ್ರೆ ಮಾಡುವವರಿಗೆ ಮೈಸೂರು ಸುತ್ತಮುತ್ತಲ ಸ್ಥಳಗಳಲ್ಲಿ ಪೂರ್ವ ತರಬೇತಿ ನೀಡಲಾಯಿತು. ಚಾಮುಂಡಿಬೆಟ್ಟದಿಂದ ಕುಕರಹಳ್ಳಿ ಕೆರೆವರೆಗೆ ವಾರದ ದಿನಗಳಲ್ಲಿ ನಡಿಗೆ ತರಬೇತಿ, ವಾರಾಂತ್ಯದಲ್ಲಿ ಚಾಮುಂಡಿಬೆಟ್ಟ, ಕುಂತಿಬೆಟ್ಟ ಸೇರಿದಂತೆ ಇನ್ನಿತರೆ ಬೆಟ್ಟಗುಡ್ಡಗಳನ್ನು ಏರುವ ಕಾರ್ಯ ನಡೆಸಲಾಗುತ್ತು.
ಪರ್ವತಾರೋಹಣ ತಂಡದಲ್ಲಿ ಶಿಲ್ಪಾ ನಂದೀಶ್, ಲಕ್ಷ ನಂದೀಶ್, ದೀಪಾ ಅಶೋಕ್, ಶಶಾಂಕ್, ಶ್ರೀಚೈತ್ರ, ಹೇಮಲತಾ ನಾಯಕ್, ಸುರಭಿ, ಅಜಯ್ ಗಣೇಶ್, ಮೇಘಾಗೌಡ, ಪವನ್‌ಗೌಡ, ಎನ್. ಸುಧಾಸತೀಶ್, ವೈಶಾಲಿ ಯೋಗೇಶ್, ಅನುಷಾ ಗಣೇಶ್, ರಘುವೀರ್, ನರೇಂದ್ರಬಾಬು, ಜಯೇಶ್ ಮುಲೇವಾ, ನೀಲ್ ರಾಕೇಶ್ ಕಡೋತ್, ಬಿ.ವಜ್ರತೇಜ್ ಇದ್ದರು.
ಒಂದೊಂದು ಹೊಸ ಅನುಭವ
ನಾನು 26 ವರ್ಷಗಳಿಂದ ಪರ್ವತಾರೋಹಣ ಸಾಹಸ ಯಾತ್ರೆ ಕೈಗೊಳ್ಳುತ್ತಿದ್ದೇನೆ. ಪ್ರತಿ ವರ್ಷ ಒಂದೊಂದು ಹೊಸ ಅನುಭವವಾಗುತ್ತಿದೆ. ಬಹುತೇಕರು ತಂಡದಲ್ಲಿ ಹೊಸಬರಿದ್ದುದ್ದರಿಂದ ಎಚ್ಚರಿಕೆ ವಹಿಸಬೇಕಾಗಿತ್ತು.
ಭಾರಿ ಹಿಮಪಾತದಿಂದಾಗಿ ರೋಲಾ ಖೋಲಿ ಶಿಬಿರವನ್ನು ಬಳಸಲಾಗಲಿಲ್ಲ. ಶಿಬಿರದ ಸ್ಥಳವು 5-6 ಅಡಿ ಹಿಮದಡಿಯಲ್ಲಿತ್ತು. ಹಾಗಾಗಿ ನಾವು ಬತ್ತೇರಿಧಾರ್‌ನಲ್ಲಿ ಬಿಡಾರ ಹೂಡಬೇಕಾಯಿತು. ಇಳಿಯುವಾಗ ಮಂಡಿವರೆವಿಗೂ ಹಿಮ ಆವರಿಸಿದ್ದರಿಂದ ಎಚ್ಚರಿಕೆಯಿಂದ ಯಾತ್ರಿಗಳನ್ನು ಕರೆತರಬೇಕಾಯಿತು.
ಟೈಗರ್ ಸೋಲಂಕಿ
ಪರ್ವತಾರೋಹಿಗಳ ಮಾರ್ಗದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net