ಮೈಸೂರು : ಮೇವಿನ ಕೊರತೆ ಎದುರಿಸಲು ಸಿದ್ಧತೆ

ಮೇವು ಅರಸಿ ಹೊರಟ ಜಾನುವಾರುಗಳು
ಮೇವು ಅರಸಿ ಹೊರಟ ಜಾನುವಾರುಗಳು
Published on
ಸದೇಶ್ ಕಾರ್ಮಾಡ್, ಮೈಸೂರು
ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸುಮಾರು 35 ವಾರಗಳಿಗೆ ಸಾಕಾಗುವಷ್ಟು ಒಣ ಮೇವು ದಾಸ್ತಾನು ಇರುವುದರಿಂದ ತಕ್ಷಣಕ್ಕೆ ಯಾವುದೇ ಆತಂಕವಿಲ್ಲ.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಲಭ್ಯತೆ ಕುರಿತು ಇಲಾಖೆ ನಿರಂತರವಾಗಿ ನಿಗಾ ವಹಿಸಿದೆ. ರೈತರು ತಮ್ಮಲ್ಲಿ ಲಭ್ಯವಿರುವ ಭತ್ತ, ರಾಗಿ ಹುಲ್ಲು ಹಾಗೂ ಜೋಳದ ಕಡ್ಡಿಯನ್ನು ಸಂಗ್ರಹಿಸಿಟ್ಟುಕೊಂಡಿರುವುದು ಸದ್ಯ ಮೇವಿನ ಕೊರತೆ ಉಂಟಾಗದಿರಲು ಪ್ರಮುಖ ಕಾರಣವಾಗಿದೆ.
ಇದರೊಂದಿಗೆ ಈ ಹಿಂದೆ ಪಶುಪಾಲನಾ ಇಲಾಖೆಯಿಂದ ರೈತರಿಗೆ ವಿತರಿಸಲಾಗಿದ್ದ ಮೇವಿನ ಮರದ ಸಸಿಗಳನ್ನು ಹಲವರು ತಮ್ಮ ಜಮೀನಿನ ಬದುಗಳಲ್ಲಿ ಬೆಳೆಸಿದ್ದಾರೆ. ಇದೀಗ ಈ ಸಸಿಗಳು ಬೆಳೆದು ಮರಗಳಾಗಿರುವುದರಿಂದ ಜಾನುವಾರುಗಳಿಗೆ ಅಗತ್ಯವಿರುವ ಹಸಿ ಮೇವು ಲಭ್ಯವಾಗುವ ನಿರೀಕ್ಷೆಯೂ ಇದೆ. ಹೀಗಾಗಿ ಒಣ ಮೇವಿನ ಜತೆಗೆ ಹಸಿ ಮೇವಿನ ಲಭ್ಯತೆಯನ್ನೂ ಹೆಚ್ಚಿಸಲು ಇಲಾಖೆ ಕ್ರಮ ವಹಿಸುತ್ತಿದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಮನೆಗಳಲ್ಲಿರುವ ಜಾನುವಾರುಗಳ ಆರೋಗ್ಯ, ಮೇವು ಮತ್ತು ನೀರಿನ ಲಭ್ಯತೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯಾವುದೇ ಗ್ರಾಮದಲ್ಲಿ ಮೇವಿನ ಕೊರತೆ ಕಂಡುಬಂದಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಮೇವಿನ ಲಭ್ಯತೆ, ಜಾನುವಾರುಗಳ ಸಂಖ್ಯೆ ಹಾಗೂ ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ಅಗತ್ಯವಿರುವ ಕಡೆ ಮೇವು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ.

31 ಸಾವಿರ ಮಿನಿ ಕಿಟ್‌ಗೆ ಬೇಡಿಕೆ

ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಇಲಾಖೆಯಿಂದ 1,500 ಮಿನಿ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಇದೀಗ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮೇವುಗಳನ್ನು ಬೆಳೆಯಲು ಹೆಚ್ಚುವರಿಯಾಗಿ 31 ಸಾವಿರ ಮಿನಿ ಮೇವಿನ ಕಿಟ್‌ಗಳಿಗೆ ಬೇಡಿಕೆ ಸಲ್ಲಿಕೆಯಾಗಿದ್ದು, ವಿತರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮೇವಿನ ಕಿಟ್‌ಗಳ ಮೂಲಕ ರೈತರು ತಮ್ಮ ಜಮೀನಿನಲ್ಲಿ ಹಸಿ ಮೇವು ಬೆಳೆಯಲು ಉತ್ತೇಜನ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು ಲಭ್ಯತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ.
ಸಾಮಾನ್ಯವಾಗಿ ಹಿಂದಿನ ವರ್ಷ ಬೆಳೆದ ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳ ಉಳಿಕೆಯಿಂದ ದೊರೆಯುವ ಹುಲ್ಲು ಹಾಗೂ ಕಡ್ಡಿಯನ್ನು ರೈತರು ಒಣ ಮೇವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ, ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಕೃಷಿ ಬೆಳೆಗಳ ಮೇಲೂ ಪರಿಣಾಮ ಬೀರಿದೆ.
ಬೆಳೆ ಇಳುವರಿ ಕಡಿಮೆಯಾಗುವುದರಿಂದ ಮುಂದಿನ ವರ್ಷ ಸಂಗ್ರಹವಾಗುವ ಒಣ ಮೇವಿನ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮೇವು ಲಭ್ಯವಿದ್ದರೂ, ಮುಂದಿನ ವರ್ಷದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಜಾನುವಾರುಗಳಿಗೆ ನೀರಿನ ವ್ಯವಸ್ಥೆ:

ಬೇಸಿಗೆ ಹಾಗೂ ಮಳೆ ಕೊರತೆಯ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಅಗತ್ಯವಿರುವ ಕಡೆ ಈ ತೊಟ್ಟಿಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ನೀರಿನ ತೊಟ್ಟಿಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಲಾಗುತ್ತಿದ್ದು, ಬಳಕೆಗೆ ಯೋಗ್ಯ ಸ್ಥಿತಿಯಲ್ಲಿ ಇರುವಂತೆ ನಿರ್ವಹಣೆ ಮಾಡಲಾಗುತ್ತಿದೆ. ಗ್ರಾಮಗಳಿಗೆ ಭೇಟಿ ನೀಡುವ ಇಲಾಖೆ ಸಿಬ್ಬಂದಿ ನೀರಿನ ಲಭ್ಯತೆಯ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಕೊಟ್ಟಿಗೆಯಲ್ಲಿ ತಂಪಾದ ವಾತಾವರಣ ನಿರ್ಮಿಸುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ. ತೀವ್ರ ಬಿಸಿಲಿನ ಸಂದರ್ಭದಲ್ಲಿ ಜಾನುವಾರುಗಳನ್ನು ಮೇಯಲು ಬಿಡದಂತೆ ಹಾಗೂ ಸಾಧ್ಯವಾದಷ್ಟು ನೆರಳಿನ ವ್ಯವಸ್ಥೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಒದಗಿಸುವುದು, ನೀರಿನ ತೊಟ್ಟಿಗಳನ್ನು ಸ್ವಚ್ಛವಾಗಿಡುವುದು ಹಾಗೂ ಕೊಟ್ಟಿಗೆಯಲ್ಲಿ ಗಾಳಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ರೈತರಿಗೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ.

ಜಾನುವಾರುಗಳ ವಿವರ:

ಜಿಲ್ಲೆಯಲ್ಲಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಸೇರಿದಂತೆ ಒಟ್ಟು 9,33,298 ಜಾನುವಾರುಗಳು ಇವೆ. ಮೈಸೂರು ತಾಲೂಕಿನಲ್ಲಿ 1,45,809 ನಂಜನಗೂಡಿನಲ್ಲಿ 1,67,465, ಕೆ.ಆರ್. ನಗರದಲ್ಲಿ 1,32,613, ಹುಣಸೂರಿನಲ್ಲಿ 1,16,616, ಪಿರಿಯಾಪಟ್ಟಣ 1,16,365, ತಿ.ನರಸೀಪುರದಲ್ಲಿ 1,18,199, ಎಚ್.ಡಿ. ಕೋಟೆಯಲ್ಲಿ 91,032, ಸರಗೂರು ತಾಲೂಕಿನಲ್ಲಿ 45,199 ಜಾನುವಾರುಗಳು ಇವೆ. ಇಷ್ಟು ದೊಡ್ಡ ಸಂಖ್ಯೆಯ ಜಾನುವಾರುಗಳಿಗೆ ನಿರಂತರವಾಗಿ ಮೇವು ಹಾಗೂ ಕುಡಿಯುವ ನೀರು ಒದಗಿಸುವುದು ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ಮಳೆ ಕೊರತೆಯಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಗ್ರಾಮ ಮಟ್ಟದಿಂದಲೇ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವು ದಾಸ್ತಾನು ಇದೆ. ಪ್ರಸ್ತುತ ಜಿಲ್ಲೆಯಲ್ಲಿ 35 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದೆ. ಜಾನುವಾರುಗಳಿಗೆ ಹಸಿ ಮೇವು ದೊರೆಯುವಂತೆ ಮಾಡಲು ಮೇವಿನ ಕಿಟ್‌ಗಳನ್ನು ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಲಾಗಿದ್ದು, ಎಲ್ಲ ತೊಟ್ಟಿಗಳನ್ನು ಶುಚಿಗೊಳಿಸಿ ಸುಸ್ಥಿತಿಯಲ್ಲಿ ಇಡಲಾಗಿದೆ. ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.
ಬಿ.ಎನ್. ಸಿದ್ದರಾಮು, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net