ಮೈಸೂರು ಪೊಲೀಸರಿಂದ 15 ಲಕ್ಷ ರೂ. ಮೌಲ್ಯದ 33 ಬೈಕ್, ಸ್ಕೂಟರ್‌ಗಳ ವಶ

ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು
ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು
Published on

ಪ್ರಮುಖ ಮುಖ್ಯಾಂಶಗಳು

  • ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ
  • ಸುಲಿಗೆ ಪ್ರಕರಣದಲ್ಲಿಯೂ ಬಂಧಿಯಾಗಿ ನ್ಯಾಯಾಲಯದಲ್ಲಿ ವಿಚಾರಣೆ

ಮೈಸೂರು:

ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ನಗರದ ದೇವರಾಜ ಠಾಣೆ ಪೊಲೀಸರು, ಬಂಧಿತನಿಂದ 15 ಲಕ್ಷ ರೂ. ಬೆಲೆ ಬಾಳುವ 33 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಹಾರನಹಳ್ಳಿ ಬಳಿಯ ನಿಲುವಾಡಿ ಗ್ರಾಮದ ಶ್ರೀನಿವಾಸ ಅಲಿಯಾಸ್ ಸೀನಾ (41) ಬಂಧಿತ ಆರೋಪಿ.
ಕೆ.ಆರ್.ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿದೆ ಎಂದು ಬಂದ ದೂರನ್ನು ದಾಖಲಿಸಿಕೊಂಡ ದೇವರಾಜ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ನಗರದ ಕಾಳಿದಾಸ ರಸ್ತೆಯ ಮಾರಮ್ಮನ ದೇವಸ್ಥಾನದ ಬಳಿ ಕಡಿಮೆ ಬೆಲೆಗೆ ಬೈಕ್ ಮಾರಾಟ ಮಾಡಲಾಗುತ್ತಿದೆ ಎಂದು ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ವೇಳೆ ನಕಲಿ ಕೀ ಬಳಸಿ ವಾಹನಗಳನ್ನು ಕಳ್ಳತನ ಮಾಡಿದ್ದು, ಅಂತಹ ವಾಹನಗಳನ್ನು ಚಿಕ್ಕನೇರಳೆ, ದೊಡ್ಡನೇರಳೆ, ಸಂತೆಮಾಳ, ಕೆಲ್ಲೂರು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಮಾರಾಟ ಮಾಡುವ ಸಂದರ್ಭದಲ್ಲಿ ಈ ಬೈಕ್, ಸ್ಕೂಟರ್‌ಗಳು ಲೋನ್ ಕಟ್ಟದೆ ಸೀಜ್ ಅಗಿವೆ. ಮುಂದಿನ ವಾರ ದಾಖಲೆ ತಂದುಕೊಡುವುದಾಗಿ ಜನರನ್ನು ನಂಬಿಸುತ್ತಿದ್ದ ಎನ್ನಲಾಗಿದೆ.
ಮಾರಾಟ ಮಾಡಿ ಬಂದ ಹಣದಲ್ಲಿ ಆರೋಪಿ ಶ್ರೀನಿವಾಸ ಶೋಕಿ ಮಾಡುತ್ತಿದ್ದ. ಅಲ್ಲದೆ ಈತನ ವಿರುದ್ಧ ಸುಲಿಗೆ ಪ್ರಕರಣವೊಂದರಲ್ಲಿ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ವಿಚಾರಣೆ ಕೂಡಾ ನಡೆಯುತ್ತಿದೆ. ಈತನ ಬಂಧನದಿಂದ ದೇವರಾಜ ಠಾಣೆಯ ವ್ಯಾಪ್ತಿಯಲ್ಲಿಸ 9, ಹುಣಸೂರು ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ 7, ನಜರ್‌ಬಾದ್ ವ್ಯಾಪ್ತಿಯಲ್ಲಿ 6, ಮೇಟಗಳ್ಳಿ, ವಿಜಯನಗರ, ಕೆ.ಆರ್.ನಗರ ಠಾಣೆ ವ್ಯಾಪ್ತಿಯಲ್ಲಿ ತಲಾ 2, ಜಯಲಕ್ಷ್ಮೀಪುರಂ, ಅಶೋಕಪುರಂ, ಕೃಷ್ಣರಾಜ ಠಾಣೆ, ಎಚ್.ಡಿ.ಕೋಟೆ, ಕೊಣನೂರು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ವಾಹನ ಕಳ್ಳತನ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸುಂದರರಾಜ್, ದೇವರಾಜ ವಿಭಾಗದ ಎಸಿಪಿ ಕೆ.ರಾಜೇಂದ್ರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಕೆ.ಆರ್.ರಘು, ಪಿಎಸ್‌ಐ (ಅಪರಾಧ) ಎಸ್.ನಾಗರಾಜ, ಸಿಬ್ಬಂದಿ ಆರ್.ಆರ್.ಮಂಜುನಾಥ್, ಎಂ.ಪಿ.ಮಂಜುನಾಥ್, ಎಚ್.ವಿ.ಮಧುಕೇಶ್, ವೈ.ಟಿ.ಮಹೇಶ್, ಎಚ್.ಆರ್.ಮಂಜುನಾಥ, ಸಿ.ಸುನೀಲ್‌ಕುಮಾರ್, ಎನ್.ಎಂ.ಮಹೇಶ್‌ಕುಮಾರ್, ಶಿವರಾಜ್‌ಕುಮಾರ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net