ಮೈಸೂರು: ‘ವಿಜಯವಾಣಿ’ಯಿಂದ ಅರ್ಥಪೂರ್ಣ ಯೋಗ ದಿನ ಆಚರಣೆ

ನಗರದ ಶ್ರೀ ಹೊಸಮಠದ ಶ್ರೀ ನಟರಾಜ ಪ್ರತಿಷ್ಠಾನ ಒಳಾಂಗಣದಲ್ಲಿ ವಿಜಯವಾಣಿ ವತಿಯಿಂದ ಭಾನುವಾರ ಶ್ರೀ ನಟರಾಜ ಪ್ರತಿಷ್ಠಾನ, ಬಸವಮಾರ್ಗ ಫೌಂಡೇಷನ್ ಹಾಗೂ ಎಚ್.ವಿ. ರಾಜೀವ್ ಸ್ನೇಹ ಬಳಗದ ಸಹಯೋಗದೊಂದಿಗೆ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ನಗರದ ಶ್ರೀ ಹೊಸಮಠದ ಶ್ರೀ ನಟರಾಜ ಪ್ರತಿಷ್ಠಾನ ಒಳಾಂಗಣದಲ್ಲಿ ವಿಜಯವಾಣಿ ವತಿಯಿಂದ ಭಾನುವಾರ ಶ್ರೀ ನಟರಾಜ ಪ್ರತಿಷ್ಠಾನ, ಬಸವಮಾರ್ಗ ಫೌಂಡೇಷನ್ ಹಾಗೂ ಎಚ್.ವಿ. ರಾಜೀವ್ ಸ್ನೇಹ ಬಳಗದ ಸಹಯೋಗದೊಂದಿಗೆ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
Published on
ಮೈಸೂರು: ವಿಜಯವಾಣಿ ದೈನಿಕ ವತಿಯಿಂದ ನಗರದ ಶ್ರೀ ಹೊಸಮಠದ ಶ್ರೀ ನಟರಾಜ ಪ್ರತಿಷ್ಠಾನ ಒಳಾಂಗಣದಲ್ಲಿ ಭಾನುವಾರ ಶ್ರೀ ನಟರಾಜ ಪ್ರತಿಷ್ಠಾನ, ಬಸವಮಾರ್ಗ ಫೌಂಡೇಷನ್ ಹಾಗೂ ಎಚ್.ವಿ. ರಾಜೀವ್ ಸ್ನೇಹ ಬಳಗದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಜಯವಾಣಿ, ಶ್ರೀ ನಟರಾಜ ಪ್ರತಿಷ್ಠಾನ, ಬಸವಮಾರ್ಗ ಫೌಂಡೇಷನ್ ಹಾಗೂ ಎಚ್.ವಿ. ರಾಜೀವ್ ಸ್ನೇಹ ಬಳಗದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಯೋಗ ಶಿಕ್ಷಕ ಎಚ್.ಪಿ. ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಎಲ್ಲರು ಯೋಗ ಪ್ರದರ್ಶಿಸಿದರು.
ಮೂರು ಬಾರಿ ಓಂಕಾರದ ಪಠಣದೊಂದಿಗೆ ಯೋಗಾಭ್ಯಾಸ ಪ್ರಾರಂಭಗೊಂಡಿತು. ಕುತ್ತಿಗೆ ಚಾಲನ ಕ್ರಿಯೆ, ಸೊಂಟದ ಚಾಲನ ಕ್ರಿಯೆ, ಮಂಡಿ ಚಾಲನ ಕ್ರಿಯೆಯ ಬಳಿಕ ತಾಡಾಸನ, ವೃಕ್ಷಾಸಾನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ಉಷ್ಟ್ರಾಸನ, ಶಶಂಕಾಸನ, ವಕ್ರಾಸನ, ಭುಜಂಗಾಸನ, ಶಲಬಾಸನ, ಮಕರಾಸನ, ಸೇತುಬಂಧಾಸನ, ಪವನಮುಕ್ತಾಸನ, ಶವಾಸನ ನಡೆಸಲಾಯಿತು. ಆ ನಂತರ ಪ್ರಾಣಾಯಾಮದಲ್ಲಿ ಭಸ್ತ್ರಿಕಾ, ಕಪಾಲಬಾತಿ, ಅನುಲೋಮ ವಿಲೋಮ, ನಾಡಿಶೋಧನ, ಭ್ರಾಮರಿ ಪ್ರಾಣಾಯಾಮದೊಂದಿಗೆ ಧ್ಯಾನ ನೆರವೇರಿತು. ಬಳಿಕ ಲೋಕ ಕಲ್ಯಾಣ ಮಂತ್ರದೊಂದಿಗೆ ಸಾಮೂಹಿಕ ಯೋಗಾಭ್ಯಾಸ ಮುಕ್ತಾಯಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಆಯುಷ್ ಇಲಾಖೆಯ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಯೋಗತಜ್ಞ ಪಿ. ರವಿಕುಮಾರ್ ಮಾತನಾಡಿ, ಮನಸ್ಸು ಹಾಗೂ ಶರೀರವನ್ನು ಜೋಡಿಸುವುದೇ ಯೋಗ. ಯೋಗಾಸನದಲ್ಲಿ ಕೆಲವು ಆಸನಗಳನ್ನು ಸರಿಯಾಗಿ ಮಾಡಿದ ಮಾತ್ರಕ್ಕೆ ಅದನ್ನು ಯೋಗ ಎಂದು ಕರೆಯಲು ಸಾಧ್ಯವಿಲ್ಲ. ಯೋಗದಲ್ಲಿ ಅಷ್ಟಾಂಗ ಅತ್ಯಂತ ಪ್ರಮುಖವಾದದ್ದು. ಅಷ್ಟಾಂಗವನ್ನು ತಿಳಿದುಕೊಂಡಾಗ ಮಾತ್ರ ಯೋಗವನ್ನು ಪೂರ್ಣವಾಗಿ ಅರಿತುಕೊಳ್ಳಬಹುದು ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಣ ಇದ್ದ ಮಾತ್ರಕ್ಕೆ ಒಬ್ಬರನ್ನು ಶ್ರೀಮಂತ, ಭಾಗ್ಯವಂತ ಎಂದು ಕರೆಯಲು ಸಾಧ್ಯವಿಲ್ಲ. ಆರೋಗ್ಯ ಇದ್ದರೆ ಮಾತ್ರ ಭಾಗ್ಯ. ಈ ಕಾರಣಕ್ಕಾಗಿ ಆರೋಗ್ಯವೇ ಭಾಗ್ಯ ಎನ್ನುತ್ತೇವೆ. ಒಂದುವೇಳೆ ಹಣ ಇದ್ದು ಆರೋಗ್ಯ ಇಲ್ಲದೆ ಹೋದರೆ ಆ ಹಣವೂ ವ್ಯರ್ಥ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗದಂ ತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯೋಗ ಕಲಿತರೆ ಅದುವೇ ನಮಗೆ ಸಂಪತ್ತು, ಆಯಸ್ಸು, ಯಶಸ್ಸು ಹಾಗೂ ಸರ್ವಸ್ವ. ಯೋಗ ಎಂದರೆ ಕೇವಲ ವ್ಯಾಯಾಮವಲ್ಲ. ಯೋಗ ಅಂದರೆ ಸಂಪತ್ತು ಹೌದು, ಆಧ್ಯಾತ್ಮವೂ ಹೌದು. ನಮ್ಮ ಜೀವನದ ಸರ್ವಸ್ವವೇ ಯೋಗ. ಯೋಗ ದಿನಾಚರಣೆ ಮೂಲಕ ವಿದ್ಯಾರ್ಥಿಗಳಲ್ಲಿ ಯೋಗದ ಕುರಿತು ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ. ಯೋಗ ದಿನಾಚರಣೆ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಯೋಗ ಶಿಕ್ಷಕಿ ಎಂ. ಉಮಾಕಾಂತಿ ಮಾತನಾಡಿ, ಯೋಗದಿಂದ ಕೇವಲ ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ನಿರಂತರ ಯೋಗಾಭ್ಯಾಸದಿಂದ ನೀವು ಮನದಲ್ಲಿ ಹೊಂದಿರುವ ಗುರಿಗಳು ಸಹ ಈಡೇರುತ್ತದೆ. ಹಾಗಾಗಿ ಪ್ರತಿಯೊಬ್ಬರು ತಪ್ಪದೆ ಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಯೋಗ ಬಹುದೊಡ್ಡ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಹುಟ್ಟಿದ ಯೋಗವು ಇದೀಗ ವಿಶ್ವಾದ್ಯಂತ ಜನಪ್ರಿಯವಾಗಿದೆ. ಪ್ರಧಾನಿ ನರೇಂದ್ರ 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಆಚರಿಸಲು ಮನವಿ ಮಾಡಿಕೊಂಡರು. ಅವರ ಮನವಿ ಮೇರೆಗೆ 2015ರ ನಂತರ ಪ್ರತಿ ವರ್ಷ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.
ನಾವು ಬಳಸುವ ಆಹಾರ, ಉಸಿರಾಡುವ ಗಾಳಿ ಹಾಗೂ ನಾವು ಜೀವಿಸುವ ಪರಿಸರ ನಮ್ಮ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಪ್ರತಿನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಯೋಗ ಶಿಕ್ಷಕರಾದ ಎಂ. ಉಮಾಕಾಂತಿ, ಎಂ.ಹರಿಶ್ರೀ, ಅಂತಾರಾಷ್ಟ್ರೀಯ ಯೋಗಪಟು ವೇದಿಕಾ ಮಾನ್ಯ ಶಿವಂ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
**ಶ್ರಿ
ನಗರದ ಶ್ರೀ ಹೊಸಮಠದ ಶ್ರೀ ನಟರಾಜ ಪ್ರತಿಷ್ಠಾನ ಒಳಾಂಗಣದಲ್ಲಿ ಭಾನುವಾರ ವಿಜಯವಾಣಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಎಂ. ಉಮಾಕಾಂತಿ, ಎಂ.ಹರಿಶ್ರೀ, ಅಂತಾರಾಷ್ಟ್ರೀಯ ಯೋಗಪಟು ವೇದಿಕಾ ಮಾನ್ಯ ಶಿವಂ ಅವರನ್ನು ಸನ್ಮಾನಿಸಲಾಯಿತು. ಪಿ. ರವಿಕುಮಾರ್, ಪ್ರೊ.ಎಸ್. ಶಿವರಾಜಪ್ಪ, ಎಂ.ಆರ್. ಸತ್ಯನಾರಾಯಣ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net