ಮೈಸೂರು: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ನಿರ್ದೇಶನ

 ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
Published on
ಮೈಸೂರು: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಕೂಡಲೇ ಗುರುತಿಸಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕು. ತೆರವುಗೊಳಿಸಿದ ನಂತರ ಮತ್ತೆ ಒತ್ತುವರಿ ಆಗದಂತೆ ತಡೆಯಲು ಬಂದೋಬಸ್ತ್ ಮಾಡಬೇಕು ಎಂದು ಸೂಚನೆ ನೀಡಿದರು.
ಗ್ರಾಮಾಂತರ ಭಾಗದಲ್ಲಿ ಪ್ರಾಥಮಿಕ ಆಸ್ಪತ್ರೆ, ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರ, ವಸತಿ ನಿಲಯಗಳು, ಆಶ್ರಯ ಬಡಾ ವಣೆಗಳು ಸೇರಿದಂತೆ ವಿವಿಧ ಸರ್ಕಾರಿ ಕಾರ್ಯಗಳಿಗೆ ಭೂಮಿಯ ಅವಶ್ಯಕತೆ ಇದೆ. ಹೀಗಾಗಿ ಒತ್ತುವರಿ ಭೂಮಿಯನ್ನು ಗುರುತಿಸಿ ತೆರವುಗೊಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಸರ್ಕಾರಿ ಭೂಮಿ, ಕೆರೆ, ಕಟ್ಟೆಗಳ ಒತ್ತುವರಿಗೆ ಸಂಬಂಧಿಸಿದಂತೆ ತಹಸಿಲ್ದಾರ್, ಎಡಿಎಲ್‌ಆರ್‌ಗಳು ವಿವರಣೆ ನೀಡಿದಾಗ ಅಧಿಕಾರಿಗಳು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಟ್ಟಿ ಮಾಡಿಕೊಂಡು ದಿನಾಂಕ ನಿಗದಿಪಡಿಸಿಕೊಳ್ಳಬೇಕು. ನಂತರ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗಮನಾರ್ಹ ಪ್ರಗತಿಸಾಧಿಸಬೇಕು. ರೈತರು ಸೇರಿದಂತೆ ಪ್ರತಿಯೊಬ್ಬರಿಗೂ ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದೆ. ಸಾರ್ವಜನಿಕರು ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಕಚೇರಿಗೆ ಅಲೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇ-ಪೌತಿ ಖಾತೆ ಆಂದೋಲನದಿಂದಾಗಿ ಜನರಿಗೆ ಅನುಕೂಲವಾಗಿದೆ. ಉಪ ವಿಭಾಗಾಧಿಕಾರಿಗಳು, ತಹಸಿಲ್ದಾರ್‌ಗಳು, ರಾಜಸ್ವ ನಿರೀಕ್ಷಕರು ತಮ್ಮ ಹಂತದಲ್ಲಿ ಪರಿಶೀಲನೆ ನಡೆಸಿ ಇ-ಪೌತಿ ಖಾತೆ ಪ್ರಕ್ರಿಯೆ ಮುಗಿಸಬೇಕು. ಮುಂದಿನ ದಿನಗಳಲ್ಲಿ ನಾನೇ ಹಳ್ಳಿಗಳಿಗೆ ಭೇಟಿ ನೀಡಿ ಇ-ಪೌತಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯನಿರ್ವಹಿಸಬೇಕು. ಒಂದು ವೇಳೆ ನಿರ್ಲಕ್ಷೃ ವಹಿಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಜನರ ಸಮಸ್ಯೆಗಳು ಗ್ರಾಮ ಹಾಗೂ ತಾಲೂಕು ಹಂತಗಳಲ್ಲಿಯೇ ಬಗೆ ಹರಿಯಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನರು ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಪರಿಸ್ಥಿತಿ ನಿರ್ಮಾಣ ಮಾಡಬಾರದು ಎಂದು ಹೇಳಿದರು.
ಭೂ ಸುರಕ್ಷಾ ಯೋಜನೆಯಡಿ ತಹಸಿಲ್ದಾರ್, ಎಸಿ ಕಚೇರಿಗಳಲ್ಲಿರುವ ಎಲ್ಲ ಕಡತಗಳನ್ನು ಪ್ರತಿದಿನ ಸ್ಕಾೃನಿಂಗ್ ಮಾಡಿ ಕಂಪ್ಯೂಟರ್‌ನಲ್ಲಿ ಅಪ್ಲೋಡ್ ಮಾಡಬೇಕು. ಬಾಕಿ ಇರುವಂತಹ ದಾಖಲೆಗಳನ್ನು ಸ್ಕಾೃನ್ ಮಾಡಬೇಕು. ಈ ಪ್ರಕ್ರಿಯೆ ಮುಗಿದರೆ ರೈತರಿಗೆ ತಾವು ಇರುವ ಜಾಗದಲ್ಲೇ ಆನ್‌ಲೈನ್ ಮೂಲಕ ದಾಖಲೆಗಳನ್ನು ಪಡೆಯಲು ನೆರವಾಗಲಿದೆ. ಪ್ರತಿದಿನ 200ರಿಂದ 300 ದಾಖಲೆಗಳನ್ನು ಸ್ಕಾೃನ್ ಮಾಡಿದರೆ ಮಾರ್ಚ್ ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬಹುದು. ಈ ಕಾರ್ಯದ ಮೇಲುಸ್ತುವಾರಿಯನ್ನು ತಹಸಿಲ್ದಾರ್ ವಹಿಸಿಕೊಂಡು ಪ್ರತಿದಿನದ ಪ್ರಗತಿಯ ಮಾಹಿತಿ ಪಡೆಯಬೇಕು ಎಂದು ಸೂಚನೆ ನೀಡಿದರು.
ಶೇ.100ರಷ್ಟು ಆಧಾರ್ ಸೀಡಿಂಗ್: ಆರ್‌ಟಿಸಿಗೆ ಆಧಾರ್ ಸೀಡಿಂಗ್ ಕಾರ್ಯವನ್ನು ಶೇ.100ರಷ್ಟು ಪೂರ್ಣಗೊಳಿಸಬೇಕು. ಆಧಾರ್ ಸೀಡಿಂಗ್ ಮುಖ್ಯವಾಗಿದೆ. ಇದರಿಂದಾಗಿ ಬೋಗಸ್ ಪ್ರಕರಣಗಳನ್ನು ತಡೆಯಲು ಕ್ರಮವಹಿಸಬಹುದು. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಆಧಾರ್ ಸೀಡಿಂಗ್ ಕಾರ್ಯ ಪ್ರಗತಿಯಲ್ಲಿದ್ದರೂ ಮೈಸೂರು ಮೊದಲನೇ ಜಿಲ್ಲೆಯಾಗುವಂತೆ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಉಪ ವಿಭಾಗಾಧಿಕಾರಿಗಳು, ತಹಸಿಲ್ದಾರ್‌ಗಳು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಆಡಳಿತ ಅಧಿಕಾರಿಗಳ ಕೆಲಸವನ್ನು ಮೇಲ್ವಿಚಾರಣೆ ನಡೆಸಬೇಕು. ಗ್ರಾಮೀಣ ಭಾಗದ ರೈತರು, ಸಾರ್ವಜನಿಕರ ಸಮಸ್ಯೆಗಳನ್ನು ಅಲ್ಲಿಯೇ ಕೇಳಿ ಪರಿಹರಿಸಬೇಕು. ಮುಖ್ಯಮಂತ್ರಿಗಳ ಜಿಲ್ಲೆಯಾಗಿರುವುದರಿಂದ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರುಗಳು ಬರಬಾರದು. ನಿಮ್ಮ ಹಂತದಲ್ಲೇ ಪರಿಹಾರ ಕಂಡರೆ ಜಿಲ್ಲಾಧಿಕಾರಿ ಕಚೇರಿಗೆ ಬರುವುದು ತಪ್ಪುತ್ತದೆ. ಹಾಗಾಗಿ, ಅರ್ಜಿ ಸ್ವೀಕರಿಸಿದ ಮೇಲೆ ಅದಕ್ಕೆ ಪರಿಹಾರ ಕಲ್ಪಿಸುವುದು ಅಗತ್ಯವಿದೆ ಎಂದರು. ಸಭೆಯಲ್ಲಿ ಮೈಸೂರು, ಹುಣಸೂರು ಉಪ ವಿಭಾಗದ ಉಪ ವಿಭಾಗಾಧಿಕಾರಿಗಳು, ತಹಸಿಲ್ದಾರ್‌ಗಳು, ಡಿಡಿಎಲ್‌ಆರ್, ಎಡಿಎಲ್‌ಆರ್‌ಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net