ಮೈಸೂರು: ದೇಸಿ ಎಣ್ಣೆ ಮೇಳ ಸಂಪನ್ನ

ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ದೇಸಿ ಎಣ್ಣೆ ಮೇಳ’ ಪ್ರಯುಕ್ತ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ದೇಸಿ ಎಣ್ಣೆ ಮೇಳ’ ಪ್ರಯುಕ್ತ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Published on
ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಮತ್ತು ದೇಸಿರಿ ನ್ಯಾಚುರಲ್ಸ್ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ‘ದೇಸಿ ಎಣ್ಣೆ ಮೇಳ’ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಮೇಳವು ಮೂರು ದಿನಗಳ ಕಾಲ ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಮಾರುಕಟ್ಟೆಯಲ್ಲಿ ಸಿಗುವ ಎಣ್ಣೆಗಳಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ. ಸಾಂಪ್ರದಾಯಿಕ ಗಾಣದ ಎಣ್ಣೆಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಇವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿದರೂ ಸಾಕು ಉತ್ತಮ ಆರೋಗ್ಯ ಲಭಿಸಲಿದೆ ಎಂದರು.
ದೇಸಿ ಎಣ್ಣೆ ಮೇಳ, ಗಾಣದ ಎಣ್ಣೆ ಸಂಸ್ಕೃತಿ, ವೈವಿಧ್ಯ ಮತ್ತು ಅಡುಗೆ ಪದ್ಧತಿಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಮೇಳಗಳು ಎಲ್ಲೆಡೆ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಶಿವಪ್ರಸಾದ್ ಹುಡೇದ್, ಆಯುರ್ವೇದ ತಜ್ಞ ಡಾ. ಶ್ರೀಹರ್ಷ, ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಡಾ.ಅಸ್ನ ಊರೂಜ್, ಹೋಮಿಯೋಪತಿ ವೈದ್ಯ ಡಾ.ಅಭಿಜಿತ್, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಯುನಾನಿ ವೈದ್ಯೆ ಡಾ.ನವೀದಾ ಹಾಗೂ ಇತರರು ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆ: ದೇಸಿ ಎಣ್ಣೆ ಮೇಳದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 32 ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಾವು ಕಂಡ ದೇಸಿ ಎಣ್ಣೆಯ ಲೋಕವನ್ನು ಬಣ್ಣಗಳ ಮೂಲಕ ತೆರೆದಿಟ್ಟರು. 5ರಿಂದ 9 ವರ್ಷ ವಿಭಾಗದಲ್ಲಿ ಆರ್.ಕುಶಾಲ್(ಪ್ರಥಮ), ಎಸ್.ಕೆ.ರಾಜ್‌ದೀಪ್ ನಂದಿ (ದ್ವಿತೀಯ) ಮತ್ತು ಎಂ.ಆದ್ಯ ಶ್ರೀವತ್ಸ(ತೃತೀಯ), 10ರಿಂದ 12 ವರ್ಷದ ವಿಭಾಗದಲ್ಲಿ ಆರ್.ಸುದೀಕ್ಷಾ (ಪ್ರಥಮ), ಎಂ.ಪ್ರಣತಿ(ದ್ವಿತೀಯ) ಮತ್ತು ಗೋಕುಲ್ ಆರ್ಯನ್(ತೃತೀಯ) ಬಹುಮಾನ ಪಡೆದರು. ದೇಸಿ ಎಣ್ಣೆ ಅಡುಗೆ ಸ್ಪರ್ಧೆಯಲ್ಲಿ ವಾತ್ಸಲ್ಯ(ಪ್ರಥಮ), ಸುನೀತಾ(ದ್ವಿತೀಯ) ಮತ್ತು ಎಸ್.ನವೀನ್(ತೃತೀಯ) ಬಹುಮಾನ ಗಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net