ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮೈಸೂರಿನ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ನಗರ ಪಾಲಿಕೆ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿದೆ. ನಗರದ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಅಶುಚಿತ್ವ ಉಂಟಾಗುತ್ತಿರುವ ತಾಣಗಳನ್ನು ಗುರುತಿಸಿ, ಅವುಗಳನ್ನು ಸ್ವಚ್ಛ ಹಾಗೂ ಆಕರ್ಷಕ ತಾಣಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
ನಗರದ ವಿವಿಧೆಡೆ ಜನರು ಪ್ರತಿನಿತ್ಯ ಮೂತ್ರ ವಿಸರ್ಜನೆಗೆ ಬಳಸುತ್ತಿರುವ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಮೊದಲ ಹಂತದಲ್ಲಿ ಅಂತಹ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಂಡು, ಬಳಿಕ ಗೋಡೆಗಳಿಗೆ ಸ್ವಚ್ಛತೆ ಹಾಗೂ ಸಾರ್ವಜನಿಕ ಅರಿವು ಮೂಡಿಸುವ ಸಂದೇಶಗಳನ್ನು ಬರೆಯಲಾಗುತ್ತಿದೆ. ಜತೆಗೆ ಆಕರ್ಷಕ ಚಿತ್ರಗಳನ್ನು ಬಿಡಿಸಿ, ಸಾರ್ವಜನಿಕರು ಮತ್ತೊಮ್ಮೆ ಆ ಸ್ಥಳವನ್ನು ಮೂತ್ರ ವಿಸರ್ಜನೆಗೆ ಬಳಸಿಕೊಳ್ಳದಂತೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಇಷ್ಟಕ್ಕೇ ಸೀಮಿತವಾಗದ ಪಾಲಿಕೆ, ಈ ಸ್ಥಳಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಬೆಂಚುಗಳನ್ನು ಅಳವಡಿಸುವುದು, ಹೂ ಕುಂಡಗಳನ್ನು ಇಡುವುದು ಸೇರಿದಂತೆ ಸೌಂದರ್ಯೀಕರಣ ಕಾರ್ಯಕ್ಕೂ ಆದ್ಯತೆ ನೀಡುತ್ತಿದೆ. ಈ ಮೂಲಕ ಈ ಹಿಂದೆ ಅಶುಚಿತ್ವದ ತಾಣವಾಗಿದ್ದ ಜಾಗವೊಂದು ಜನರು ನಿಂತು ನೋಡುವ, ಕುಳಿತುಕೊಳ್ಳುವ ಮತ್ತು ನಗರ ಸೌಂದರ್ಯದ ಭಾಗವಾಗುವ ರೀತಿಯಲ್ಲಿ ಪರಿವರ್ತನೆಯಾಗುತ್ತಿದೆ.
ನಗರದಲ್ಲಿ ಮೊದಲ ಬಾರಿಗೆ ಪೀಪಲ್ಸ್ ಪಾರ್ಕ್ ಸಮೀಪ ಮೂತ್ರ ವಿಸರ್ಜನೆಯಿಂದ ಅಶುಚಿತ್ವದ ತಾಣವಾಗಿದ್ದ ಜಾಗವನ್ನು ಅಭಿವೃದ್ಧಿಪಡಿಸಲಾಯಿತು. ಇದೀಗ ಸಯ್ಯಜಿರಾವ್ ರಸ್ತೆಯಲ್ಲಿದ್ದ ಇಂತಹದ್ದೇ ತಾಣಕ್ಕೂ ಸುಂದರ ರೂಪ ನೀಡಲಾಗಿದೆ. ಮುಂದಿನ ಹಂತದಲ್ಲಿ ದ್ವನಂತ್ರಿ ರಸ್ತೆಯಲ್ಲಿ ಈ ರೀತಿಯ ಸ್ವಚ್ಚತಾ ಹಾಗೂ ಸೌಂದರ್ಯೀಕರಣ ಕಾರ್ಯ ಕೈಗೊಳ್ಳಲು ಪಾಲಿಕೆ ಸಿದ್ಧತೆ ನಡೆಸಿದೆ. ಇದಾದ ಬಳಿಕ ನಗರದ ವಿವಿಧೆಡೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವ ತಾಣಗಳನ್ನು ಹಂತ ಹಂತವಾಗಿ ಗುರುತಿಸಿ, ಅವುಗಳನ್ನು ಸ್ವಚ್ಛ ಹಾಗೂ ಸುಂದರ ಸ್ಥಳಗಳಾಗಿ ಪರಿವರ್ತಿಸುವ ಉದ್ದೇಶವನ್ನು ಹಾಲಿಗೆ ಹೊಂದಿದೆ. ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಮೂತ್ರ ವಿಸರ್ಜನೆ ತಾಣಗಳನ್ನು ಸುಂದರಗೊಳಿಸುವುದರ ಜತೆಗೆ, ನಗರದಲ್ಲಿ ಅಗತ್ಯವಿರುವ ಪ್ರದೇಶಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಶೌಚಗೃಹಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಶೌಚಗೃಹಗಳು ನಿರ್ಮಾಣವಾದರೆ, ಜನರು ಸಾರ್ವಜನಿಕ ಸ್ಥಳಗಳನ್ನು ಬಳಸಿಕೊಳ್ಳುವ ಅಗತ್ಯವೂ ಕಡಿಮೆಯಾಗಲಿದೆ.
ಇದೇ ಮಾದರಿಯಲ್ಲಿ ನಗರದಲ್ಲಿ ಜನರು ಪ್ರತಿನಿತ್ಯ ತ್ಯಾಜ್ಯ ಸುರಿಯುತ್ತಿದ್ದ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಜನರ ಗಮನ ಸೆಳೆಯುವ ಆಕರ್ಷಕ ತಾಣಗಳಾಗಿ ರೂಪಿಸುವ ಕಾರ್ಯವನ್ನೂ ಪಾಲಿಕೆ ಯಶಸ್ವಿಯಾಗಿ ಕೈಗೊಂಡಿದೆ. ಇದರಿಂದ ಹಲವಾರು ಕಡೆಗಳಲ್ಲಿ ಜನರು ಕಸವನ್ನು ರಸ್ತೆಗೆ ಸುರಿಯುವುದು ನಿಂತಿದೆ. ಆದರೆ, ಕೆಲವು ಕಡೆಗಳಲ್ಲಿ ಜನರು ಮತ್ತೆ ತ್ಯಾಜ್ಯ ತಂದು ಸುರಿಯುತ್ತಿರುವುದು ಕಂಡು ಬಂದಿದೆ. ನಗರ ಪಾಲಿಕೆ ಇಂತಹ ಜನರಿಗೆ ದಂಡ ವಿಧಿಸುವ ಮೂಲಕ ಅವರನ್ನು ಸರಿದಾರಿಗೆ ಕರೆ ತರುವ ಕಾರ್ಯ ಮಾಡುವ ಅವಶ್ಯಕತೆ ಇದೆ.
ನಗರದ ಗ್ರಾಮಾಂತರ ಬಸ್ ನಿಲ್ದಾಣ ಸಮೀಪದ ಜಾಗ ಮೂತ್ರ ವಿಸರ್ಜನೆಯ ತಾಣವಾಗಿತ್ತು. ಆ ಜಾಗದಲ್ಲಿ ನಗರ ಪಾಲಿಕೆಯು ಸ್ಟೀಲ್ ಮಿರರ್ ಅಳವಡಿಸಿದ ನಂತರ ಜನರು ಆ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಪಾಲಿಕೆಯ ಈ ಕ್ರಮ ದೇಶದ ಗಮನ ಸೆಳೆದಿತ್ತು.
ನಗರವನ್ನು ಸ್ವಚ್ಛವಾಗಿಡುವ ಹೊಣೆಗಾರಿಕೆ ಕೇವಲ ದಾಲಿಕೆಯದ್ದಲ್ಲ. ಹಾಲಿಕೆಯ ಪ್ರಯತ್ನಕ್ಕೆ ಸಾರ್ವಜನಿಕರು ಕೈಜೋಡಿಸಿ, ಸಾರ್ವ ಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡದೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿದರೆ ಮೈಸೂರು ಮತ್ತೆ ದೇಶದ ನಂ.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಾಧ್ಯ ಎಂಬ ಆಶಯ ವ್ಯಕ್ತವಾಗಿದೆ.
ನಗರದಲ್ಲಿ ಜನರು ಮೂತ್ರವಿಸರ್ಜನೆ ಮಾಡುವ ತಾಣಗಳನ್ನು ಗುರುತಿಸಿ ಅವುಗಳನ್ನು ಸುಂದರ ಜಾಗವಾಗಿ ರೂಪಿಸಲು ನಗರ ಪಾಲಿಕೆ ಕ್ರಮ ವಹಿಸುತ್ತಿದೆ. ಈಗಾಗಲೇ ಈ ರೀತಿ ಎರಡು ಕಡೆಗಳಲ್ಲಿ ಮೂತ್ರ ವಿಸರ್ಜನೆಯ ತಾಣ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಹಂತದಲ್ಲಿ ವಿವಿಧ ಕಡೆಗಳಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಜಾಗದ ಸಮೀಪದಲ್ಲಿ ಎಲ್ಲಿ ಶೌಚಗೃಹ ಇದೆ ಎಂಬ ಮಾಹಿತಿಯ ಫಲಕವನ್ನು ಸಹ ಅಳವಡಿಸಲಾಗುವುದು.
ಕೆ.ಎಸ್. ಮೃತ್ಯುಂಜಯ, ಕಾರ್ಯನಿರ್ವಾಹಕ ಎಂಜಿನಿಯರ್ (ಪರಿಸರ), ನಗರ ಪಾಲಿಕೆ