ರಸ್ತೆ ಅಪಘಾತ ‘ಟಾಪ್ 10ರಲ್ಲಿ ಮೈಸೂರು’: ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚೌವ್ಹಾಣ್ ಮಾಹಿತಿ

 ವಸಂತ್ ಚೌವ್ಹಾಣ್
ವಸಂತ್ ಚೌವ್ಹಾಣ್
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಬಾರಿ ರಸ್ತೆ ಅಪಘಾತದಲ್ಲಿ ಮೈಸೂರು 6ನೇ ಸ್ಥಾನದಲ್ಲಿತ್ತು. ಇನ್ನೂ ಅಪಘಾತ ಪ್ರಕರಣ ಕಡಿಮೆ ಮಾಡಬೇಕಿದೆ
  • ವ್ಹೀಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್‌ಗಳ ದುಷ್ಪರಿಣಾಮ, ಕಾನೂನಿನ ಮೂಲಕ ವಿಧಿಸಬಹುದಾದ ಶಿಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು
ಮೈಸೂರು: ರಸ್ತೆ ಅಪಘಾತದಲ್ಲಿ ಮೈಸೂರು ಟಾಪ್ 10ರಲ್ಲಿ ಇದ್ದು, ಅಪಘಾತ ತಗ್ಗಿಸಲು ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಚೌವ್ಹಾಣ್ ತಿಳಿಸಿದರು.
ರಾಜ್ಯದಲ್ಲಿ ಅತಿಹೆಚ್ಚು ಅಪಘಾತ ಪ್ರಕರಣ ದಾಖಲಾಗುವ ಪಟ್ಟಿಯಲ್ಲಿ ಮೈಸೂರು ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಹಮ್ಮಿಕೊಂಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಬಾರಿ ರಸ್ತೆ ಅಪಘಾತದಲ್ಲಿ ಮೈಸೂರು 6ನೇ ಸ್ಥಾನದಲ್ಲಿತ್ತು. ಇನ್ನೂ ಅಪಘಾತ ಪ್ರಕರಣ ಕಡಿಮೆ ಮಾಡಬೇಕಿದೆ. ಪ್ರತಿ ವರ್ಷದಂತೆ ಈ ವರ್ಷವು ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ಮಾಸ ಅಚರಿಸಲಾಗುತ್ತಿದೆ. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಅತಿವೇಗದ ವಾಹನ ಚಾಲನೆ, ವ್ಹೀಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್‌ಗಳ ದುಷ್ಪರಿಣಾಮ, ಕಾನೂನಿನ ಮೂಲಕ ವಿಧಿಸಬಹುದಾದ ಶಿಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ರಸ್ತೆ ಅಪಘಾತದಿಂದ ಕಳೆದ ವರ್ಷ 28 ಸಾವಿರ ಸಾವು-ನೋವು ಉಂಟಾಗಿವೆ. ಮೈಸೂರು ಜಿಲ್ಲೆಯಲ್ಲೇ 300ಕ್ಕೂ ಹೆಚ್ಚು ಸಾವುಗಳಾಗಿವೆ. ಆದ್ದರಿಂದ ಸಂಚಾರ ನಿಯಮ ಪಾಲನೆ ಮಾಡಿದರೆ ಬಹಳಷ್ಟು ಸಾವು ನೋವು ತಡೆಗಟ್ಟಬಹುದು ಎಂದರು.
ಮಧ್ಯವರ್ತಿಗಳ ಮೊರೆ ಹೋಗಬೇಡಿ: ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಡಿ.ಎಲ್. ಹಾಗೂ ಎಲ್.ಎಲ್.ಆರ್. ಸೇರಿದಂತೆ 26ಕ್ಕೂ ಹೆಚ್ಚಿನ ಸೇವೆಯನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ವಾಹನ ತಂತ್ರಾಂಶಕ್ಕೆ ಸೇವೆಗಳಾದ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ತೆರಿಗೆ ಪಾವತಿ, ಕರಾರು ಒಪ್ಪಂದ ಹಾಗೂ ರದ್ದತಿ, ತೆರಿಗೆ ತೀರುವಳಿ ಪತ್ರ ನೀಡಿಕೆ, ನಕಲು ನೋಂದಣಿ ಪತ್ರ, ನೋಂದಣಿ ಪತ್ರ ನವೀಕರಣಗಳಂತ ವಿವಿಧ ಸೇವೆಗಳನ್ನು ಆನ್‌ಲೈನ್ ಮಾಡಲಾಗಿದೆ ಎಂದು ತಿಳಿಸಿದರು.
ವಾಹನದ ಮಾಲೀಕರು ಇಲಾಖೆಯಲ್ಲಿ ನೀಡುವ ಸೇವೆಗಳಿಗೆ ಸಂಬಂಧಿಸಿದಂತೆ ಆರಂಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಂಡು ಆಧಾರ್ ಒಟಿಪಿ ಆಧಾರದ ಮೇಲೆ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿ ಕಚೇರಿಯಲ್ಲಿ ಸಲ್ಲಿಸಿ ನೇರವಾಗಿ ಸೇವೆಗಳನ್ನು ಪಡೆಯಬಹುದು ಎಂದರು.
ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿರುವ ಸಾರಿಗೆ ವಾಹನಗಳ ಸಂಖ್ಯೆ 55,742 ಆಗಿದ್ದು, ಸಾರಿಗೇತರ ವಾಹನಗಳು 11,63,369 ವಾಹನಗಳು ನೋಂದಣಿಯಾಗಿವೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು ನೋಂದಣಿ ಆಗಿರುವ ವಾಹನಗಳ ಸಂಖ್ಯೆ 12,15,212 ವಾಹನಗಳು ಎಂದು ಹೇಳಿದರು.
ಎಆರ್‌ಟಿಒ ರಾಮಚಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net