ತೀವ್ರ ಮಳೆಯ ಕೊರತೆ ಎದುರಿಸುತ್ತಿರುವ ಜಿಲ್ಲೆಯ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಗುರುವಾರ ಘೋಷಣೆ ಮಾಡಿದೆ.
ಪಿರಿಯಾಪಟ್ಟಣ ತಾಲೂಕು ಹೊರತು ಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಮೈಸೂರು, ನಂಜನಗೂಡು, ತಿ.ನರಸೀಪುರ, ಸರಗೂರು, ಎಚ್.ಡಿ. ಕೋಟೆ, ಕೆ.ಆರ್. ನಗರ ಹಾಗೂ ಸಾಲಿಗ್ರಾಮ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿದೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದರು. ಮಳೆ ಹಾಗೂ ಬೆಳೆಯ ಪರಿಸ್ಥಿತಿ ಅವಲೋಕಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇಲೆ ಬರಪೀಡಿತ ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ.
ವರುಣ ಅವಕೃಪೆ: ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆಯ ಕೊರತೆ ಕಂಡು ಬಂದಿದ್ದು, ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಮಳೆಯನ್ನು ನಂಬಿ ಕೃಷಿ ಚಟುವಟಿಕೆ ಪ್ರಾರಂಭಿಸಿದ ರೈತರು ಇದೀಗ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವಯನಾಡು ಹಾಗೂ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೆ ಜಿಲ್ಲೆಯ ರೈತರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಆದರೆ, ಈ ಆ ಎರಡು ಜಿಲ್ಲೆಗಳಲ್ಲೂ ತೀವ್ರ ಮಳೆ ಕೊರತೆ ಎದುರಾಗಿರುವುದು ರೈತರ ಸಂಕಷ್ಟವನ್ನು ಹೆಚ್ಚು ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದರೆ ಕುಶಾಲನಗರದ ಹಾರಂಗಿ ಜಲಾಶಯ ಹಾಗೂ ಮಂಡ್ಯದ ಕೆಆರ್‌ಎಸ್ ಜಲಾಶಯ ಭರ್ತಿಯಾಗುತಿತ್ತು. ಅದೇ ರೀತಿ ವಯನಾಡಿನಲ್ಲಿ ಉತ್ತಮ ಮಳೆಯಾದರೆ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ಭರ್ತಿಯಾಗುತ್ತದೆ. ಆದರೆ, ಮಳೆಯ ಕೊರತೆಯಿಂದ ಹಾರಂಗಿ ಹೊರತು ಪಡಿಸಿ ಉಳಿದ ಜಲಾಶಯಗಳು ಭರ್ತಿಯಾಗಿಲ್ಲ. ಕಬಿನಿ ಜಲಾಶಯ ಭರ್ತಿಯಾಗುವ ಹಂತ ತಲುಪಿದಾಗ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಪ್ರಸ್ತುತ ಜಲಾಶಯ ಬರಿದಾಗುವ ಹಂತ ತಲುಪಿದೆ.
2284 ಅಡಿಗಳಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2272.76 ಅಡಿಗಳಷ್ಟು ಮಾತ್ರ ನೀರು ಇದೆ. ಜಲಾಶಯದಲ್ಲಿ ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಆದರೆ, ಪ್ರಸ್ತುತ 13.07 ಟಿಎಂಸಿ ಮಾತ್ರ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19.12 ಟಿಎಂಸಿ ನೀರು ಇತ್ತು. ಜಲಾಶಯದ ನೀರಿನ ಮಟ್ಟವು ಭೀಕರ ಬರಗಾಲದ ಚಿತ್ರಣವನ್ನು ತೆರೆದಿಟ್ಟಿದೆ.