ನಾಳೆಯಿಂದ ತಂಬಾಕು ಖರೀದಿ ಪುನಾರಂಭ

ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ.
ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ.
Published on
ಹುಣಸೂರು : ಅನುತ್ಪಾದಕ(ಅನ್ ಮ್ಯಾನುಫ್ಯಾಕ್ಚರ್ಡ್‌) ತಂಬಾಕಿಗೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ಜಿಎಸ್‌ಟಿ ಏರಿಕೆ ಮಾಡುವ ಪ್ರಸ್ತಾಪದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಸರ್ಕಾರದ ನೀತಿಯ ವಿರುದ್ಧ ಇಂಡಿಯನ್ ಟೊಬ್ಯಾಕೋ ಅಸೋಸಿಯೇಷನ್(ಐಟಿಎ) ಕೈಗೊಂಡಿದ್ದ ತಾತ್ಕಾಲಿಕ ಖರೀದಿ ಬಂದ್ ಅನ್ನು ಹಿಂಪಡೆದಿದೆ. ಫೆ.5ರಿಂದ ಖರೀದಿ ಪುನಾರಂಭವಾಗಲಿದೆ ಎಂದು ತಂಬಾಕು ಮಂಡಳಿ ಪ್ರಾದೇಶಿಕ ಅಧಿಕಾರಿ(ಮೈಸೂರು ವಿಭಾಗ) ಗೋಪಾಲ್ ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಕೇಂದ್ರ ಸರ್ಕಾರ ಅನುತ್ಪಾದಕ ತಂಬಾಕಿಗೆ ಶೇ.18ರ ಪ್ರಮಾಣದಲ್ಲಿ ಅಬಕಾರಿ ಸುಂಕ ಹಾಗೂ ಜಿಎಸ್‌ಟಿ ದರವನ್ನು ಶೇ.28ರಿಂದ ಶೇ.40ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿತ್ತು. ಅಲ್ಲದೆ ಈ ಏರಿಕೆ ಫೆ.2ರ ಪ್ರಸ್ತುತ ಸಾಲಿನ ಕೇಂದ್ರ ಆಯವ್ಯಯ ಮಂಡನೆಯ ನಂತರ ಜಾರಿಗೆ ಬರಲಿದೆ ಎಂದು ಘೋಷಿಸಿತ್ತು. ಅನುತ್ಪಾದಕ ತಂಬಾಕಿಗೆ ಕೇಂದ್ರ ಸರ್ಕಾರ ದುಬಾರಿ ಶುಲ್ಕ ವಿಧಿಸಲು ಹೊರಟಿರುವುದನ್ನು ವಿರೋಧಿಸಿ ಖರೀದಿ ಕಂಪನಿಗಳ ಒಕ್ಕೂಟವಾದ ಇಂಡಿಯನ್ ಟೊಬ್ಯಾಕೋ ಅಸೋಸಿಯೇಷನ್ ಜ.24ರಿಂದ ತಾತ್ಕಾಲಿಕವಾಗಿ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಸುವುದನ್ನು ರದ್ದುಗೊಳಿಸಿತ್ತು. ಆ.26ರ ವಿಜಯವಾಣಿ ಸಂಚಿಕೆಯಲ್ಲಿ ‘ತಂಬಾಕು ಖರೀದಿ ಸ್ಥಗಿತಗೊಳಿಸಿದ ಖರೀದಿದಾರರು’ ಶೀರ್ಷಿಕೆಯಡಿ ಸಮಸ್ಯೆ ಕುರಿತು ವಿಸ್ತ್ರತ ವರದಿ ಪ್ರಕಟಗೊಂಡಿತ್ತು.
ಇದರ ಪರಿಣಾಮ ರಾಜ್ಯದ್ಯಂತ ತಂಬಾಕು ಬೆಳೆಯುವ ರೈತರು ತೀವ್ರ ಅಸಮಾಧಾನ ಹೊರಹಾಕಿದ್ದರು. ಸರ್ಕಾರ ಮತ್ತು ಖರೀದಿ ಕಂಪನಿಗಳ ನಡುವಿನ ಜಟಾಪಟಿಯ ನಡುವೆ ರೈತರು ಬೀದಿಗೆ ಬೀಳುವಂತಾಗಿದೆ. ಖರೀದಿ ಕಂಪನಿಗಳು ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದು ಖಂಡನೀಯ. ತಂಬಾಕು ಮಂಡಳಿ ಕೂಡ ಖರೀದಿ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿ ಶೀಘ್ರ ಮಾರುಕಟ್ಟೆ ಆರಂಭಿಸಲು ಒತ್ತಾಯಿಸಿದ್ದರು.
ಇದೀಗ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಎಲ್ಲ ಶುಲ್ಕಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಹೀಗಾಗಿ ಖರೀದಿ ಪ್ರಕ್ರಿಯೆ ಪುನಾರಂಭಿಸಲು ನಿರ್ಧರಿಸಿದ್ದು, ಫೆ.5ರಿಂದ ತಂಬಾಕು ಖರೀದಿಸಲು ತಮ್ಮ ಒಕ್ಕೂಟದ ಮೂಲಕ ಕಂಪನಿಗೆ ಸೂಚಿಸಿದೆ. ಫೆ.4ರಂದು ಎಲ್ಲ ಫ್ರೋರ್‌ಗಳಲ್ಲೂ ಫ್ರೋರ್ ಕಮಿಟಿ ಸದಸ್ಯರನ್ನೊಳಗೊಂಡು ರೈತರ ಸಭೆ ಆಯೋಜಿಸಿ ಮಾಹಿತಿ ನೀಡಲಾಗುವುದು ಎಂದು ಆರ್‌ಎಂಒ ಗೋಪಾಲ್ ವಿಜಯವಾಣಿಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net