ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಅವರಿಗೆ ದಸಂಸ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು. ನಿಂಗರಾಜ ಮಲ್ಲಾಡಿ, ದಿವಾಕರ್, ಕೆಂಪರಾಜು, ಗಜೇಂದ್ರ, ರಾಜಮ್ಮ, ಮಂಜಿ ಇತರರು ಇದ್ದರು.
ಹುಣಸೂರು : ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ನಿರ್ಗತಿಕ ಬಡ ಕುಟುಂಬಗಳಿಗೆ 94 ಸಿಸಿ ಯೊಜನೆಯಡಿ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.
ಬುಧವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಚುಂಚನಕಟ್ಟೆ ಗ್ರಾಮದ ಕುಪ್ಪೆ ಸರ್ವೆ ನಂ.69ರಲ್ಲಿ ಸುಮಾರು 59 ನಿರ್ಗತಿಕ ಅಲೆಮಾರಿ ಬಡ ಕುಟುಂಬಗಳು 30 ವರ್ಷಗಳಿಂದಲೂ ಕಚ್ಚಾ ಮನೆಗಳನ್ನು ನಿರ್ಮಿಸಿಕೊಂಡು ಸರಿಯಾದ ಮೂಲ ಸೌಲಭ್ಯಗಳಿಲ್ಲದೆ ಅತ್ಯಂತ ಸಂಕಷ್ಟದ ಬದುಕು ದೂಡುತ್ತಿದ್ದಾರೆ. ಈ ಕುಟುಂಬಗಳು 94 ಸಿಸಿ ಯೋಜನೆಯಡಿ ಹಕ್ಕುಪತ್ರ ಕೊಡುವಂತೆ ಸ್ಥಳೀಯ ಕಂದಾಯ ಇಲಾಖೆಗೆ ಹಲವು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಲಾಗಿದೆ. ಆದರೆ ಸರ್ಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವ ಈ ಬಡ ನಿರ್ಗತಿಕ ಕುಟುಂಬಗಳಿಗೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಕೆಲವು ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಕೊಡದೆ ನಿರ್ಲಕ್ಷ್ಯತೆ ವಹಿಸುತ್ತಿರುವುದು ಖಂಡನೀಯ. ಅನೇಕ ಸಭೆ ಸಮಾರಂಭಗಳಲ್ಲಿ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು.
ಬಡ ಕುಟುಂಬಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಾಗ ವಿಳಂಬ ಮಾಡದೇ ಕಾನೂನು, ಮಾನವೀಯತೆ ನೆಲೆಗಟ್ಟಿನಲ್ಲಿ ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಮಾತನಾಡಿ, ಈ ಬಗ್ಗೆ ನಾನು ಸ್ಥಳಕ್ಕೆ ಬಂದು ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಮನವಿ ಸಲ್ಲಿಕೆ ವೇಳೆ ಮುಖಂಡರಾದ ಎಚ್.ಬಿ.ದಿವಾಕರ್, ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಮಾಲಿಕ್ ಪಾಷ, ಲತೇಶ್,ದಾಸಪ್ಪ, ಶೋಭಮ್ಮ, ಕುಮಾರ, ಅಮಾಸಮ್ಮ, ನಾಗಮ್ಮ, ಸರಸಮ್ಮ, ಗಂಗಮ್ಮ, ಸುಬ್ಬಲಕ್ಷ್ಮೀ, ಗೌರಿ, ಲಕ್ಷ್ಮಿ, ಸರೋಜಾ, ಮಂಜಿ, ರಾಜಮ್ಮ, ಗಣೇಶ್ ಇತರರು ಇದ್ದರು.