ಹುಣಸೂರು ತಾಲೂಕು ಗದ್ದಿಗೆಯಲ್ಲಿ ಆಯೋಜಿಸಿದ್ದ ತೆಂಗುಬೆಳೆ ಬೇಸಾಯದ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಡಾ.ನಾಗರಾಜ್, ಡಾ.ಮುತ್ತುರಾಜ್, ಡಾ.ಸಿದ್ದಪ್ಪ, ಮಹದೇವ್, ಅಧಿಕಾರಿಗಳು, ಪ್ರಗತಿಪರ ರೈತರು ಇದ್ದರು.
ಹುಣಸೂರು : ತಾಲೂಕಿನ ಗದ್ದಿಗೆ ಶ್ರೀ ಕೆಂಡಗಣ್ಣೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ತೆಂಗು ಬೆಳೆ ಬೇಸಾಯ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು.
ಮೈಸೂರಿನ ತೋಟಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ ಮಾತನಾಡಿ, ತೆಂಗಿನಮರದ ಎತ್ತರದ ತಳಿ ಮತ್ತು ಗಿಡ್ಡತಳಿಯ ವ್ಯತ್ಯಾಸ ಮತ್ತು ವೈಶಿಷ್ಟ್ಯತೆ ಕುರಿತು ಮಾಹಿತಿ ನೀಡಿದರು. ಅಲ್ಲದೆ ಮಣ್ಣು ಪರೀಕ್ಷೆ, ಹಸಿರೆಲೆ ಗೊಬ್ಬರದ ಮಹತ್ವ ತಿಳಿಸಿದರಲ್ಲದೆ, ತೆಂಗಿಗೆ ಪೋಷಾಕಾಂಶ ನೀಡಲು ಕೊಟ್ಟಿಗೆ ಗೊಬ್ಬರ ಪ್ರತಿಗಿಡಕ್ಕೆ 20 ರಿಂದ 25 ಕೆ.ಜಿ ಮತ್ತು ಬೇವಿನಹಿಂಡಿ 3 ಕೆ.ಜಿ., ರಾಸಯನಿಕ ಗೊಬ್ಬರಗಳಾದ ಆಮೋನಿಯಂ ಸಲ್ಪೇಟ್ 500 ಗ್ರಾಂ, ಡಿಎಪಿ 750 ಗ್ರಾಂ. ಮತ್ತು ಎಂಓಪಿ 1 ಕೆ.ಜಿ.ಯನ್ನು ನೀಡಬೇಕು ಎಂದು ಮಾಹಿತಿ ನೀಡಿದರು.
ರೋಗ ಮತ್ತು ಕೀಟತಜ್ಞ ಡಾ.ಮುತ್ತುರಾಜ್ ಮಾತನಾಡಿ, ತೆಂಗಿನಲ್ಲಿ ಬರುವ ರೈನೋಸರಸ್ ದುಂಬಿ, ಕಪ್ಪುತಲೆ ಹುಳು, ಕೆಂಪು ಮೂತಿಹುಳು ಮತ್ತು ಬಿಳಿನೋಣ ಬಾಧೆಯ ಲಕ್ಷಣ ಮತ್ತು ಅದರ ನಿರ್ವಹಣೆ ಮಾಹಿತಿ ನೀಡಿದರು.
1 ಲೀ. ನೀರಿಗೆ ಲೆಸೆಂಟಾ ಕೀಟನಾಶಕವನ್ನು 1 ಗ್ರಾಂ ಬೆರೆಸಿ ತೆಂಗಿನ ಸುಳಿಗೆ ಸುರಿದರೆ ಕೀಟ ಬಾಧೆ ಕಡಿಮೆಯಾಗುತ್ತದೆ. ಕಪ್ಪುತಲೆ ಹುಳುಬಾಧೆಗೆ ಪ್ರೊಫೆನೋಫಾಸ್ ಮತ್ತು ಸೈಪರ್‌ಮೆಥರಿನ್ ಸಂಮಿಶ್ರಣ ಕೀಟನಾಶಕವನ್ನು ಬೇರಿನ ಮುಖಾಂತರ ನೀಡಿದಲ್ಲಿ ಬಾಧೆ ಹತೋಟಿಗೆ ಬರಲಿದೆ ಎಂದು ತಿಳಿಸಿದರು. ಬಿಳಿನೋಣ ಬಾಧೆ ನಿಯಂತ್ರಣಕ್ಕೆ ಬೇವಿನ ಎಣ್ಣೆಯನ್ನು ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಮುದ್ದನಹಳ್ಳಿ ಗ್ರಾ.ಪಂ. ಅಧ್ಯಕ್ಷ ಮಹದೇವ್ ವಹಿಸಿದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ.ಎಚ್.ನಾಗರಾಜ್ ಇಲಾಖೆಯಿಂದ ಸಿಗುವ ಲಾಭದಾಯಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ರೈತ ಮುಖಂಡರಾದ ದೇವರಾಜು, ಸೂರ್ಯಕುಮಾರ್, ರಾಜಶೇಖರ್ , ರಾಮಕೃಷ್ಣ, ವೆಂಕಟೇಶ್, ಪ್ರಕಾಶ್ ಸ್ವಾಮಿ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಎಚ್.ಎಸ್.ರವಿ, ಎಸ್.ಎ.ನಿತಿನ್, ಎ.ಚೈತ್ರಾ, ಜಿ.ಕೆ.ಫಯಾಜ್ ಪಾಷ ಮತ್ತು ರೈತರು ಇದ್ದರು.