ಚಿಂತಕ ಪ್ರೊ.ಮುಜಾಫರ್ ಅಸ್ಸಾದಿ ಅವರಿಗೆ ಹೊಂದಾಣಿಕೆ ಮನೋಭಾವನೆ ಇದ್ದಿದ್ದರೆ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿವೃತ್ತರಾಗಬೇಕಿತ್ತು. ಅದ್ಯಾವುದಕ್ಕೂ ಆಸೆಪಡದೆ ಜೀವನದುದ್ದಕ್ಕೂ ಸೈದ್ಧಾಂತಿಕವಾಗಿ ಬದುಕಿದರು ಎಂದು ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಸಾರ್ವಜನಿಕ ಆಡಳಿತ ವಿಭಾಗ ಮತ್ತು ಮೈಸೂರು ಓಪನ್ ಫೋರಂ ಸಹಯೋಗದಲ್ಲಿ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ.ಮುಜಾಫರ್ ಅಸ್ಸಾದಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಅವರ ಚಿಂತನೆಗಳು, ಮೌಲ್ಯ ಮತ್ತು ಶಾಶ್ವತ ಪರಂಪರೆ ಕುರಿತು ಮಾತನಾಡಿದರು.
ಸಾಮಾಜಿಕ ಬುದ್ಧಿಜೀವಿ ಪ್ರೊ.ಅಸ್ಸಾದಿಗೆ ಅವರಿಗೆ ಹುದ್ದೆಗಿಂತ ಸೈದ್ಧಾಂತಿಕ ನಿಲುವು ಬಹಳ ಮುಖ್ಯವಾಗಿತ್ತು. ಅವರನ್ನು ಕುಲಪತಿ ಹುದ್ದೆಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ದೆಹಲಿ ಮಟ್ಟದಿಂದ ರಾಜ್ಯಪಾಲರಿಗೆ ಸೈದ್ಧಾಂತಿಕ ಒತ್ತಡ ಹೇರಲಾಯಿತು.
ಅದಕ್ಕೆ ಎಂದಿಗೂ ಬೇಸರ ಮಾಡಿಕೊಳ್ಳಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಮೈಸೂರು ವಿವಿಗೆ ಕುಲಪತಿ ಆಗಬಹುದಿತ್ತು. ಆದರೆ, ಈ ಸ್ಥಾನಕ್ಕಾಗಿ ಅವರ ಹಿಂದೆ ಹೋಗಬಹುದಿತ್ತು. ಆದರೆ, ಹಾಗೇ ಮಾಡಲಿಲ್ಲ. ವಿಸಿ ಮಾಡಲಿಲ್ಲವೆಂದು ಸಿದ್ದರಾಮಯ್ಯ ವಿರುದ್ಧವೂ ದೂರಲಿಲ್ಲ. ಸಿದ್ದರಾಮಯ್ಯ ಬಿಜೆಪಿ ಸೇರಿದ್ದರೆ ಆಗ ಅಸ್ಸಾದಿ ವಿರೋಧಿಸುತ್ತಿದ್ದರು ಎಂದರು.
ಅವರು ದಂತಗೋಪುರದ ಪ್ರಾಧ್ಯಾಪಕರಾಗಲಿಲ್ಲ. ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರು. ನೊಂದವರ ಪರ ಬರೆಯುತ್ತಿದ್ದರು. ಅವರಿಗಾಗಿ ಹೋರಾಟ ಕೂಡ ಮಾಡುತ್ತಿದ್ದರು. ಸಾಮಾಜಿಕ ಹಿತಾಸಕ್ತಿಗೆ ಓಗೂಡುತ್ತಿದ್ದರೆ, ಅವರ ಮೇಧಾವಿತನ, ಮಾನವಿಯ ಗುಣಗಳು ಎಲ್ಲರಿಗೂ ಬರುವುದಿಲ್ಲ ಎಂದು ತಿಳಿಸಿದರು.
ಮೈವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ.ಕೃಷ್ಣ ಹೊಂಬಾಳ್ ಮಾತನಾಡಿ, ಪ್ರತಿಯೊಬ್ಬರಿಗೂ ವೈಯಕ್ತಿಕ, ಸಾಮುದಾಯಿಕ, ಧಾರ್ಮಿಕ ಹಾಗೂ ರಾಷ್ಟ್ರೀಯತೆ ಬಗ್ಗೆ ಯಾವ ನಿಲುವು ಹೊಂದಬೇಕು ಎಂದು ಸಂದಿಗ್ಧತೆ ಇರುತ್ತದೆ. ಆ ಸಂದಿಗ್ಧತೆಯನ್ನು ಮೀರಿದರು ಮುಜಾಫರ್ ಅಸ್ಸಾದಿ ಎಂದರು.
ತುಮಕೂರು ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಮಹಾಲಿಂಗು ಅವರು, ಸಾಮಾಜಿಕ ಚಳವಳಿ ಮತ್ತು ಮೌಲ್ಯಾಧಾರಿತ ವಿಚಾರಗಳು ಕುರಿತು ವಿಷಯ ಮಂಡನೆ ಮಾಡಿದರು.