ಕೊಲೆ ಅಪರಾಧಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ

ಕಠಿಣ ಶಿಕ್ಷೆ
ಕಠಿಣ ಶಿಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಹಲ್ಲೆ ನಡೆಸಿ ಬಸವಲಿಂಗ ಅವರನ್ನು ಕೊಲೆ ಮಾಡಿದ್ದ ಜಯಪುರ ಹೋಬಳಿ ರಾಮನಹುಂಡಿಯ ಶ್ರೀನಿವಾಸ್ ಅಲಿಯಾಸ್ ಸೀನಾ (43)ಗೆ ಶಿಕ್ಷೆ
  • ಕೊಲೆ ಮಾಡಿದ್ದಕ್ಕೆ 4 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಹಲ್ಲೆ ನಡೆಸಿದ್ದಕ್ಕೆ 6 ತಿಂಗಳ ಸದಾ ಶಿಕ್ಷೆ, 500 ರೂ. ದಂಡ

ಮೈಸೂರು: ಮೊಬೈಲ್ ಎತ್ತಿಕೊಂಡ ವಿಷಯವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಅಪರಾಧಿಗೆ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದೆ.

ಹಲ್ಲೆ ನಡೆಸಿ ಬಸವಲಿಂಗ ಅವರನ್ನು ಕೊಲೆ ಮಾಡಿದ್ದ ಜಯಪುರ ಹೋಬಳಿ ರಾಮನಹುಂಡಿಯ ಶ್ರೀನಿವಾಸ್ ಅಲಿಯಾಸ್ ಸೀನಾ (43) ಶಿಕ್ಷೆಗೆ ಗುರಿಯಾದವ.
ಶಂಕರನಗರ ಬಡಾವಣೆ ಸಮೀಪ 2024ರ ಜನವರಿ ಒಂದರಂದು ಒಳಚರಂಡಿ (ಯುಜಿಡಿ) ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್, ಕೆಲಸದ ಮಧ್ಯೆ ಬಹಿರ್ದೆಸೆಗೆ ಹೋಗಿದ್ದ. ಈ ಸಮಯದಲ್ಲಿ ಬಸವಲಿಂಗ, ಸೆಕ್ಯೂರಿಟಿ ರೂಮ್‌ನಲ್ಲಿ ಚಾರ್ಜ್‌ಗೆ ಹಾಕಿದ್ದ ಶ್ರೀನಿವಾಸ್‌ನ ಮೊಬೈಲ್‌ಅನ್ನು ತೆಗೆದಿಟ್ಟುಕೊಂಡಿದ್ದರು ಎನ್ನಲಾಗಿದೆ.
ಈ ವಿಷಯ ಗೊತ್ತಾಗಿ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಲೇಔಟ್‌ನಲ್ಲೇ ಟ್ರೇಲರ್ ಕೆಳಗೆ ಮಲಗಿದ್ದ ಬಸವಲಿಂಗ ಅವರ ಜತೆ ಜಗಳ ತೆಗೆದು ಮೊಬೈಲ್ ಎತ್ತಿಕೊಂಡು ಇಲ್ಲ ಎಂದು ಸುಳ್ಳು ಹೇಳುತ್ತೀಯ ಎಂದು ಆತನ ಎದೆ, ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದ. ಇದರಿಂದ ನೋವಿನಿಂದ ಚೀರಾಡುತ್ತಿದ್ದ ಬಸವಲಿಂಗ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಈ ಬಗ್ಗೆ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ.ಜೆ.ಸೋಮಶೇಖರ ಅವರು, ಸರ್ಕಾರಿ ವಕೀಲರು ಸಾಧರ ಪಡಿಸಿ ಸಾಕ್ಷಾೃಧಾರವನ್ನು ಪರಿಗಣಿಸಿ, ಕೊಲೆ ಮಾಡಿದ್ದಕ್ಕೆ 4 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಹಲ್ಲೆ ನಡೆಸಿದ್ದಕ್ಕೆ 6 ತಿಂಗಳ ಸದಾ ಶಿಕ್ಷೆ, 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರ ಎ.ಎನ್.ಮಧು ಅವರು ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net