ಜ.3ರಂದು ಮೂಗೂರು ಬಂಡಿ ಉತ್ಸವ

ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಶ್ರೀತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ.
ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಶ್ರೀತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ.
Published on
ತಿ.ನರಸೀಪುರ: ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ತಾಲೂಕಿನ ಮೂಗೂರು ಗ್ರಾಮದಲ್ಲಿ ಶ್ರೀ ತ್ರಿಪುರಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಆರಂಭಗೊಂಡಿದ್ದು, ಜ.3ರಂದು ಬಂಡಿ ಉತ್ಸವ ಹಾಗೂ 5ರಂದು ರಥೋತ್ಸವ ನಡೆಯಲಿದೆ.
ಮೂಗಾಸುರನನ್ನು ಸಂಹರಿಸಿ, ರಕ್ತ ಬಿಜಾಸುರರನ್ನು ಸಹೋದರಿ ದೇವತೆಗಳ ಜತೆಗೂಡಿ ನಿರ್ನಾಮಗೊಳಿಸಿ ಮೂಗೂರು ಗ್ರಾಮದಲ್ಲಿ ಆದಿಶಕ್ತಿಯಾಗಿ ನೆಲೆಗೊಂಡಿರುವ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರೋತ್ಸವ ವೈಭವದಿಂದ ನಡೆಯುವ ಹಿನ್ನೆಲೆಯಲ್ಲಿ ಡಿ.24ರಂದು ಹಸ್ಥನ ಅಂಕುರಾರ್ಪಣೆಯೊಂದಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಡಿ.25ರಿಂದ 29ರವರೆಗೆ ದೈನಂದಿನ ಸಾಂಪ್ರದಾಯಿಕ ಪೂಜಾ ಕಾರ್ಯಗಳೊಂದಿಗೆ ಸ್ನಾನ ಒಪ್ಪಿಸುವ ಉತ್ಸವಗಳು ಸಾಂಗವಾಗಿ ಜರುಗಿವೆ.
ಡಿ.30ರಂದು ಅಮ್ಮನವರಿಗೆ ಪೂರ್ಣಾಭಿಷೇಕ, 31ರಂದು ವದೆ ಉತ್ಸವ, ನೂತನ ವರ್ಷ ಆರಂಭದ ಜ.1 ರಂದು ಶೇಷ ವಾಹನೋತ್ಸವ ಹಾಗೂ ಪಕ್ಷಿ ವಾಹನೋತ್ಸವ, 2ರಂದು ಸಿಂಹ ವಾಹನೋತ್ಸವ ಮತ್ತು ಚಂದ್ರಮಂಡಲೋತ್ಸವ ಆಯೋಜನೆಗೊಳ್ಳಲಿವೆ.
ಹುಣ್ಣಿಮೆಯ ದಿನವಾದ ಜ.3ರಂದು ಬಹಳ ಆಕರ್ಷಣೆಯ ಬಂಡಿ ಉತ್ಸವ ಗ್ರಾಮದ ಬಂಡಿ ಬೀದಿಯಲ್ಲಿ ಸಾಂಪ್ರಾದಾಯಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಹಾಗೂ ರುದ್ರಾಕ್ಷಿ ಮಂಟಪೋತ್ಸವ ನಡೆಯಲಿದೆ. ಇಲ್ಲಿನ ಬಂಡಿ ಉತ್ಸವಕ್ಕೂ ಮುನ್ನ ಸುತ್ತಮುತ್ತಲ ಗ್ರಾಮಗಳಲ್ಲಿ ಅಯಾಯ ನಿಗದಿತ ದಿನಾಂಕಗಳಂದು ಬಂಡಿ ಉತ್ಸವ ನಡೆಯುವುದು ವಾಡಿಕೆ. ಬಳಿಕ ಅಂತಿಮ ದೊಡ್ಡ ಬಂಡಿ ಉತ್ಸವ ಮೂಗೂರಿನಲ್ಲಿ ನಡೆಯುತ್ತದೆ.
ಜ.4ರಂದು ಗ್ರಾಮದ ಕಲ್ಯಾಣಿಯಲ್ಲಿ ಅಲಂಕೃತ ತೆಪ್ಪೋತ್ಸವ ಹಾಗೂ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. 1947ನೇ ವಿಶ್ವವಸು ಸಂವತ್ಸರೆ ದಕ್ಷಿಣಿಯನೇ ಹಿಮಂತೌರ್ತ್ ಪುಷ್ಯಮಾಸೇ ಕೃಷ್ಣಪಕ್ಷ ದ್ವಿತೀಯ ತಿಥಿ ಜ.5ರಂದು ಶುಭ ದಿವಸ ಮಧ್ಯಾಹ್ನ 3 ರಿಂದ 4.30 ಗಂಟೆಯ ಶುಭ ಸಮಯಕ್ಕೆ ಅಮ್ಮನವರ ಬ್ರಹ್ಮರಥೋತ್ಸವ ನಡೆಯಲಿದೆ. ಅಂದು ರಾತ್ರಿ ಆನೆ ವಾಹನೋತ್ಸವ ಜರುಗಲಿದೆ.
ಜ.6ರಂದು ಶ್ರೀ ಅಮ್ಮನವರು ಉತ್ಸವ ಹೊಸಹಳ್ಳಿಗೆ ದಯಮಾಡಿಸುವುದು, ಅಲ್ಲಿ ಮರದ ಕೊಂಬೆಯೊಂದನ್ನು ಸವರಿ ಬಿಟ್ಟಿದ್ದು ಮುಂಜಾನೆಯಲ್ಲಿ ಚಿಗುರು ಕಡಿಯುತ್ತದೆ. ಚಿಗುರಿದ ಎಲೆಗಳ ಸಂಖ್ಯೆಯ ಮೇಲೆ ಗ್ರಾಮಕ್ಕೆ ಶುಭ-ಅಶುಭ ಫಲಗಳ ಸೂಚನೆ ಸಿಗುತ್ತದೆ ಎಂಬುದು ಇಲ್ಲಿನ ನಂಬಿಕೆ. ಮತ್ತೆ ಉತ್ಸವ ಮೂಗೂರಿಗೆ ದಯಮಾಡಲಿದೆ. ಬಳಿಕ ಕುದುರೆ ವಾಹನೋತ್ಸವ ನಡೆಯಲಿದೆ. ಜ.7ರಂದು ಅಮ್ಮನವರ ಪಲ್ಲಕ್ಕಿ ಉತ್ಸವ, ವೈಮಾಳಿಗೆ ಉತ್ಸವ ಹಾಗೂ ರಾತ್ರಿ ಪೂರ್ಣಾಭಿಷೇಕದೊಂದಿಗೆ 15 ದಿನಗಳ ಮೂಗೂರು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಪ್ರತಿ ವರ್ಷದಂತೆ ಈ ಸಾಲಿನ ರಥೋತ್ಸವಕ್ಕೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಮಹಿಳೆ ಹಾಗೂ ಪುರುಷರಿಗೆ ಶೌಚಗೃಹ ವ್ಯವಸ್ಥೆ, ದೇವಾಲಯದ ಹೊರ ಹಾಗೂ ಒಳಾವರಣದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ತಾತ್ಕಲಿಕ ಆರೋಗ್ಯ ಕೇಂದ್ರ, ಮುಡಿ ಕಟ್ಟೆ ವ್ಯವಸ್ಥೆ, ಗ್ರಾಮದ ಬೀದಿಗಳಲ್ಲಿ ಸ್ವಚ್ಛತೆ, ಹೊಸಹಳ್ಳಿ ಗೆ ತೆರಳುವ ರಸ್ತೆ ಸ್ವಚ್ಛತಾ ಕಾರ್ಯ, ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕಲ್ಪಿಸಲು ತಾಲೂಕು ಆಡಳಿತ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net