ತಾಯಂದಿರು ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಲಿ

 ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿದ್ದಣ್ಣ ಬಾಡಗಿ, ಮಡ್ಡೀಕೆರೆ ಗೋಪಾಲ್, ರವಿ ಸಂತು, ಟಿ.ತ್ಯಾಗರಾಜು ಇನ್ನಿತರರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿದ್ದಣ್ಣ ಬಾಡಗಿ, ಮಡ್ಡೀಕೆರೆ ಗೋಪಾಲ್, ರವಿ ಸಂತು, ಟಿ.ತ್ಯಾಗರಾಜು ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಸಿದ್ದಣ್ಣ ಬಾಡಗಿ ಅಭಿಪ್ರಾಯ
  • ಮೈಸೂರು ಸಾಹಿತ್ಯ ಸಂಭ್ರಮ -2
ಮೈಸೂರು: ತಾಯಂದಿರು ಮನೆಯಿಂದಲೇ ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು ಎಂದು ಮುಧೋಳದ ಸಾಹಿತಿ ಸಿದ್ದಣ್ಣ ಬಾಡಗಿ ಹೇಳಿದರು.
ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮ-2 ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಹೀಗಾಗಿ ತಾಯಿ ಮನಸ್ಸು ಮಾಡಿದರೆ ಕನ್ನಡ ಸಂಸ್ಕಾರ ಬೆಳೆಸಬಹುದು ಎಂದರು. 
ಅಧ್ಯಾತ್ಮಿಕ ಹಾಗೂ ಸಾಹಿತ್ಯಿಕ ಕೇಂದ್ರ ಸ್ಥಾನ ಮೈಸೂರು. ಏಕೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ, ಸಾಹಿತ್ಯ, ಸಂಸ್ಕೃತಿ, ಕಲೆ ಬೆಳೆಸುವ ಕೆಲಸ ಮಾಡಿದರು. ಆದರೆ, ಕವಿ ರನ್ನ ಬರೆದಿರುವ ಮೂರು ಕೃತಿಗಳಿಂದಲೇ ಕನ್ನಡದ ಕೀರ್ತಿ ಕಲಶವಾದರು. ಕನ್ನಡವನ್ನು ಬೆಳೆಸಿಕೊಂಡು ಹೋಗಿ ಎನ್ನುವ ಬದಲು ಉಳಿಸಿಕೊಂಡು ಹೋಗಿ ಎಂದು ಹೇಳಬೇಕಾಗಿದೆ ಎಂದರು.
ಕವಿಗಳು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಬೇಕು. ಹುಟ್ಟೂರಿನ ಋಣ, ಸಮಾಜದ ಋಣ, ಭಾಷೆಯ ಋಣವನ್ನು ಯಾವತ್ತೂ ಮರೆಯಬಾರದು. ಹಾಗೆಂದ ಮಾತ್ರಕ್ಕೆ ನಾವು ಅನ್ಯ ಭಾಷೆಯ ವಿರೋಧಿಗಳಲ್ಲ. ಆದರೆ, ಕನ್ನಡ ಭಾಷೆಯ ಬಗ್ಗೆ ಪ್ರೀತಿ ಇರಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ತಲುಪಿಸುವುದೇ ಸವಾಲಿನ ಕೆಲಸ ಎಂದರು.
ಕಸಾಪ ಜಿಲ್ಲಾ ಉಪಾಧ್ಯಕ್ಷ, 103 ಬಾರಿ ರಕ್ತದಾನ ಮಾಡಿರುವ ಕೆಪಿಟಿಸಿಎಲ್ ಇಂಜಿನಿಯರ್ ಟಿ.ತ್ಯಾಗರಾಜು ಮಾತನಾಡಿ, ಪ್ರತಿಯೊಬ್ಬರೂ ಸಾಯುವ ಮುನ್ನ ಏನಾದರೂ ಸಾಧನೆ ಮಾಡಬೇಕು. ಆ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.
ಕಲಾವಿದ ರವಿ ಸಂತು ಮಾತನಾಡಿ ಶಂಕರನಾಗ್, ಅಂಬರೀಷ್ ಹಾಗೂ ಡಾ.ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಮಿಮಿಕ್ರಿ ಪ್ರದರ್ಶಿಸಿದರು. 
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನೆಲೆ ಟ್ರಸ್ಟ್ ಖಜಾಂಚಿ ಎಂ. ಶಿಲ್ಪಾ, ವಾತ್ಸಲ್ಯ ಸೇವಾ ಫೌಂಡೇಷನ್ ಅಧ್ಯಕ್ಷ ಎ.ಸಿ.ರವಿಕುಮಾರ್, ಸಮರ್ಪಣಾ ಸೇವಾ ಟ್ರಸ್ಟ್ ಅಧ್ಯಕ್ಷ ಲಯನ್ ಕುಮಾರ್, ಬೆಂಗಳೂರಿನ ಪರಿಸರ ಪ್ರೇಮಿ ಧನಲಕ್ಷ್ಮೀ, ಪ್ರಗತಿಪರ ರೈತ ರಾಜೇಗೌಡ ಇನ್ನಿತರರಿದ್ದರು
ನಿಹಾರ ಅಂಕಿತ ಕೃಷ್ಣದಾಸ್- ಭರತನಾಟ್ಯ, ಚಾಮರಾಜನಗರ ರಾಮಸಮುದ್ರದ ಸಿದ್ದರಾಜು ಮತ್ತು ತಂಡ- ಶಿವತಾಂಡವ ನೃತ್ಯ, ಮೈಸೂರಿನ ಸ್ನೇಹಭಾರತಿ ಭಜನಾ ಮಂಡಳಿಯ ಅರುಣ, ಪದ್ಮಾ ತಂಡದವರು ಗೀತಗಾಯನ ನಡೆಸಿಕೊಟ್ಟರು.
ನಂತರ ಸಾಹಿತ್ಯ ಕ್ಷೇತ್ರಕ್ಕೆ ಮೈಸೂರು ಸಂಸ್ಥಾನದ ಕೊಡುಗೆ ಕುರಿತ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಅಂಗವಿಕಲರು ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net