12ಕ್ಕೂ ಹೆಚ್ಚು ಗೋದಾಮುಗಳು ಸಂಪೂರ್ಣವಾಗಿ ಸುಟ್ಟು ಭಸ್ಮ

ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ  ಸುಟ್ಟು ಭಸ್ಮವಾದ ಗೋದಾಮುಗಳು.
ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಗೋದಾಮುಗಳು.
Published on
ಮೈಸೂರು: ನಗರದ ಹೊರ ವಲಯದ ಕೆಸರೆ ಬಡಾವಣೆಯ ರಿಂಗ್ ರಸ್ತೆಯ ಬಳಿ ಇರುವ ವರುಣ ಕಾಲುವೆ ಸಮೀಪದ ಬಳಿಯ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿ, 12ಕ್ಕೂ ಹೆಚ್ಚು ಗೋದಾಮುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ತಾಮ್ರ ತಂತಿಗಳನ್ನು ಸಂಗ್ರಹಿಸಿದ್ದ ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪಕ್ಕದ ಗೋದಾಮುಗಳಿಗೆ ವ್ಯಾಪಿಸಿದೆ. ಹಳೆಯ ಹಾಗೂ ತ್ಯಾಜ್ಯ ವಸ್ತುಗಳು, ಪೀಠೋಪಕರಣಗಳು, ಫ್ಲೈವುಡ್, ಸೋಫಾ ತಯಾರಿಕಾ ಘಟಕಗಳನ್ನು ಒಳಗೊಂಡಂತೆ ಹಲವು ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ. ಬನ್ನಿಮಂಟಪ ಅಗ್ನಿಶಾಮಕ ಠಾಣೆಯಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಸುಮಾರು ಮೂರು ಗಂಟೆಗಳ ಕಾಲ ಶ್ರಮಪಟ್ಟು ಬೆಂಕಿ ನಿಯಂತ್ರಣಕ್ಕೆ ತಂದವು. ಬೆಂಕಿ ತೀವ್ರವಾಗಿದ್ದರಿಂದ ಸುತ್ತಮುತ್ತಲ ಪ್ರದೇಶ ದಟ್ಟ ಹೊಗೆಯಿಂದ ಆವರಿಸಿತ್ತು. ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ನರಸಿಂಹರಾಜ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಇಂತಹದ್ದೇ ಅಗ್ನಿ ಅವಘಡ ಸಂಭವಿಸಿದ್ದನ್ನು ನೆನಪಿಸಿದ ಅವರು, ಅಂದು ಗೋದಾಮು ಮಾಲೀಕರು ಹಾಗೂ ಬಾಡಿಗೆದಾರರಿಗೆ ದಹನಕಾರಿ ವಸ್ತುಗಳ ಸಂಗ್ರಹಕ್ಕೆ ಎಚ್ಚರಿಕೆ ನೀಡಲಾಗಿತ್ತು. ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದಾರೆಯೇ ಎಂಬುದನ್ನು ತನಿಖೆ ಮಾಡಲಾಗುವುದು ಎಂದರು.
ಸ್ಥಳೀಯ ನಿವಾಸಿಗಳು ಹಾಗೂ ಗೋದಾಮು ಮಾಲೀಕರು, ಪ್ಲಾಸ್ಟಿಕ್ ತಂತಿಗಳನ್ನು ಸುಟ್ಟು ತಾಮ್ರ ಬೇರ್ಪಡಿಸುವ ಪ್ರಕ್ರಿಯೆ ಅಥವಾ ರಾತ್ರಿ ಅವಧಿಯಲ್ಲಿ ಉಳಿದ ಕೆಂಡಗಳು ಈ ಅಗ್ನಿ ಅವಘಡಕ್ಕೆ ಕಾರಣವಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಅಧಿಕಾರಿಗಳು, ಪೊಲೀಸ್ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರೆದಿದೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net