ಕುಮಾರವ್ಯಾಸ ಸಾಹಿತ್ಯದ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ

ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಮಡ್ಡೀಕೆರೆ ಗೋಪಾಲ್, ಡಾ.ಕೃ.ಪಾ. ಮಂಜುನಾಥ್, ಕ್ಯಾತಮಾರನಹಳ್ಳಿ ಎಂ. ಮಹೇಶ, ಡಾ.ಡಿ. ಗೀತಾ, ಎಂ. ಚಂದ್ರಶೇಖರ್, ಜಯಪ್ಪ ಹೊನ್ನಾಳಿ ಹಾಗೂ ಇತರರು ಇದ್ದರು.
ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಮಡ್ಡೀಕೆರೆ ಗೋಪಾಲ್, ಡಾ.ಕೃ.ಪಾ. ಮಂಜುನಾಥ್, ಕ್ಯಾತಮಾರನಹಳ್ಳಿ ಎಂ. ಮಹೇಶ, ಡಾ.ಡಿ. ಗೀತಾ, ಎಂ. ಚಂದ್ರಶೇಖರ್, ಜಯಪ್ಪ ಹೊನ್ನಾಳಿ ಹಾಗೂ ಇತರರು ಇದ್ದರು.
Published on
ಮೈಸೂರು: ಭಾಷಿಕ ನೆಲೆಯಲ್ಲಿ ಕುಮಾರವ್ಯಾಸನ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಿದೆ ಎಂದು ಬೆಂಗಳೂರು ಸುರಾನ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಡಿ. ಗೀತಾ ಅಭಿಪ್ರಾಯಪಟ್ಟರು.
ಜಿಲ್ಲಾ ಗಮಕ ಕಲಾ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕುಮಾರವ್ಯಾಸ ಜಯಂತಿ, ಕಾವ್ಯಾಧಾರಿತ ಕೃತಿಗಳ ಪ್ರದರ್ಶನ ಹಾಗೂ ಗಮಕ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ತ್ರೀವಾದಿ ಹಾಗೂ ಭಾಷಿಕ ನೆಲೆಯಲ್ಲಿ ಅವರೊಬ್ಬ ಅದ್ಭುತ ಕವಿ. ಆದರೆ ಅಧ್ಯಯನ ಆಗಿರುವುದು ಕಡಿಮೆ. ಕುಮಾರವ್ಯಾಸನ ಕಾವ್ಯ ಘನತೆ ಹೊಂದಿದೆ. ಕುಮಾರವ್ಯಾಸನ ಭಾರತಕಥಾಮಂಜರಿ ನೇರವಾಗಿ ಜನರನ್ನು ತಲುಪುತ್ತದೆ ಎಂದರು
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕನ್ನಡ ಇರುವವರೆಗೆ ಕುಮಾರವ್ಯಾಸರನ್ನು ಮರೆಯಲಾಗದು. ರನ್ನ, ಪೊನ್ನ, ಜನ, ರಾಘವಾಂಕರ ಜತೆಗೆ ಕುಮಾರವ್ಯಾಸರನ್ನು ಇವತ್ತಿಗೂ ಕೂಡ ನೆನೆಯಲಾಗುತ್ತಿದೆ ಎಂದರು.
ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಕ್ಯಾತಮಾರನಹಳ್ಳಿ ಎಂ. ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಅಭಿರುಚಿ ಕಡಿಮೆಯಾಗುತ್ತಿದೆ. ಗಮಕ ಕಲೆಯ ಬಗ್ಗೆ ಅನೇಕ ಕನ್ನಡ ಮೇಷ್ಟ್ರುಗಳಿಗೆ ಸರಿಯಾಗಿ ತಿಳಿದಿಲ್ಲ. ಭಾವ ಹಾಗೂ ಸಾಹಿತ್ಯ ಪ್ರಧಾನವಾದ ಗಮಕ ಕಲೆಯ ಬಗ್ಗೆ ಕನ್ನಡ ಮೇಷ್ಟ್ರುಗಳಿಗೆ ಕನಿಷ್ಠ ಜ್ಞಾನವಾದರೂ ಇರಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪ ಹಾಗೂ ಗಮಕ ಕಲಾ ಪರಿಷತ್ ಕಾರ್ಯಾಗಾರ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಕುಮಾರವ್ಯಾಸರ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃ.ಪಾ. ಮಂಜುನಾಥ್ ಮಾತನಾಡಿ, ಕುಮಾರವ್ಯಾಸರು ಗಮಕಿಗಳ ಆರಾಧ್ಯದೆವ ಎನಿಸಿಕೊಂಡಿದ್ದಾರೆ. ಪಂಪ, ರನ್ನ, ಪೊನ್ನ, ಜನ್ನ, ಕುಮಾರವ್ಯಾಸ ಜತೆಗೆ ಕುವೆಂಪು, ಪುತಿನ, ಡಿವಿಜಿ ಸೇರಿದಂತೆ ಹಲವಾರು ಕವಿಗಳು ಗಮಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್, ಹಿರಿಯ ವಿದ್ವಾಂಸ ರಾಮಶೇಷನ್, ಹಿಂದೂಸ್ಥಾನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪರಮೇಶ್ ಕೆ. ಉತ್ತನಹಳ್ಳಿ, ರಾಮಕೃಷ್ಣ ವಿದ್ಯಾಶಾಲಾ ಕನ್ನಡ ಉಪನ್ಯಾಸಕ ಸಿ.ಎಸ್. ರಾಘವೇಂದ್ರ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಖಜಾಂಚಿ ಜಿ. ಪ್ರಕಾಶ್, ಕಾರ್ಯದರ್ಶಿ ಜಯಪ್ಪ ಹೊನ್ನಾಳಿ, ಕನ್ನಡ ಉಪನ್ಯಾಸಕ ನಿ.ಗೂ. ರಮೇಶ್, ರಾಘವೇಂದ್ರ, ವನಮಾಲ, ಚಂದ್ರಶೇಖರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net