ಉದ್ಯೋಗಾಕಾಂಕ್ಷಿಗಳಿಗೆ ಕಲ್ಪಿತ ಪರೀಕ್ಷೆಗಳು ಸಹಕಾರಿ

 ನಗರ ಕೇಂದ್ರ ಗ್ರಂಥಾಲಯದಿಂದ ಆಯೋಜಿಸಿದ್ದ ಕಲ್ಪಿತ ಪರೀಕ್ಷೆಯನ್ನು  ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ ವೀಕ್ಷಿಸಿದರು. ಬಿ.ಮಂಜುನಾಥ್, ರಮೇಶ್ ನರಸಯ್ಯ ಇದ್ದರು.
ನಗರ ಕೇಂದ್ರ ಗ್ರಂಥಾಲಯದಿಂದ ಆಯೋಜಿಸಿದ್ದ ಕಲ್ಪಿತ ಪರೀಕ್ಷೆಯನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ ವೀಕ್ಷಿಸಿದರು. ಬಿ.ಮಂಜುನಾಥ್, ರಮೇಶ್ ನರಸಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್.ಎಲ್.ಚೆನ್ನಬಸವಣ್ಣ ಅಭಿಮತ
  • ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜನೆ
ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಉದ್ಯೋಗಾಕಾಂಕ್ಷಿಗಳ ಮನಸ್ಸಿನಲ್ಲಿರುವ ಭಯ ಮತ್ತು ಆತಂಕ ಹೋಗಲಾಡಿಸಲು ಕಲ್ಪಿತ ಪರೀಕ್ಷೆಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ ಅಭಿಪ್ರಾಯಪಟ್ಟರು.
ನಗರ ಕೇಂದ್ರ ಗ್ರಂಥಾಲಯದಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ ಕಲ್ಪಿತ ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದರು.
ಪೊಲೀಸ್ ಇಲಾಖೆಗೆ ಸೇರಲು ಇಚ್ಛಿಸುವವರು ಕೇವಲ ಉದ್ಯೋಗಕ್ಕಾಗಿ ಬರಬಾರದು. ಸೇವೆಗೆ ಸೇರ್ಪಡೆಗೊಂಡ ನಂತರ ಇಲಾಖೆಯ ವರ್ಚಸ್ಸು ಮತ್ತು ಘನತೆ ಹೆಚ್ಚಿಸುವಂತೆ ನಡೆದುಕೊಳ್ಳಬೇಕು. 
ಶಿಷ್ಟ ರಕ್ಷಣೆ, ದುಷ್ಟರ ನಿಗ್ರಹ ಎಂಬುದು ಕೇವಲ ಘೋಷವಾಕ್ಯವಾಗಿ ಉಳಿಯದೆ, ಅದು ಪ್ರತಿಯೊಬ್ಬರ ಕರ್ತವ್ಯದ ಮಂತ್ರವಾಗಬೇಕು ಎಂದರು.
ಮೈಸೂರಿನ ನಗರ ಕೇಂದ್ರ ಗ್ರಂಥಾಲಯವು ಹಮ್ಮಿಕೊಂಡಿರುವ ಈ ಕಲ್ಪಿತ ಪರೀಕ್ಷೆಗಳ ಸರಣಿ ಅತ್ಯಂತ ವಿಶೇಷವಾದುದಾಗಿದೆ. ಇದು ಬಡ ಹಾಗೂ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ಶ್ಲಾಘಿಸಿದರು. 
ಇದೇ ವೇಳೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಕಾಲದಲ್ಲಿ ಯಾವುದೇ ಸಂಸ್ಥೆಗಳೂ ಈ ರೀತಿಯ ಕಲ್ಪಿತ ಪರೀಕ್ಷೆ ನಡೆಸುತ್ತಿರಲಿಲ್ಲ. 
ಹೀಗಾಗಿ ನಾನು ಮತ್ತು ನನ್ನ ಸ್ನೇಹಿತರು ನಮ್ಮ ಕೊಠಡಿಗಳಲ್ಲೇ ಈ ರೀತಿಯ ಪರೀಕ್ಷೆ ಸ್ವತಃ ಸಿದ್ಧಪಡಿಸಿಕೊಂಡು ಅಭ್ಯಾಸ ಮಾಡುತ್ತಿದ್ದೆವು. ಆದರೆ ಈಗಿನ ವಿದ್ಯಾರ್ಥಿಗಳಿಗೆ ಇಂತಹ ಉತ್ತಮ ಅವಕಾಶಗಳು ಸಿಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಈ ಪರೀಕ್ಷೆಗಳು ರಾಜ್ಯದ ಗಮನ ಸೆಳೆದಿವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿರುವ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೂ ಇಂತಹ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಓದುವ ಸಾಮಗ್ರಿ ನೀಡಿ ಸಹಕರಿಸುವಂತೆ ಕೋರಿವೆ. 
ಈ ನಿಟ್ಟಿನಲ್ಲಿ ನಮ್ಮ ಗ್ರಂಥಾಲಯ ಹಾಗೂ ಬೆಂಗಳೂರಿನ ಜ್ಞಾನಗಂಗೋತ್ರಿ ಸಂಸ್ಥೆಯು ಜಂಟಿಯಾಗಿ ಆ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ನೆರವು ನೀಡಲು ಮುಂದಾಗಿದೆ ಎಂದು ಹೇಳಿದರು. 
ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರಮೇಶ್ ನರಸಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net