ನೀರು ಸರಬರಾಜು ಬಿಲ್‌ನಲ್ಲಿ ಗೊಂದಲದ ಬಗ್ಗೆ ಶಾಸಕ ಕೆ.ಹರೀಶ್ ಗೌಡ ಪ್ರಸ್ತಾಪ

 ಕೆ.ಹರೀಶ್ ಗೌಡ
ಕೆ.ಹರೀಶ್ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಉಸ್ತುವಾರಿ ಸಚಿವರಿಂದ ಪರಿಹರಿಸುವ ಭರವಸೆ

ನಗರದ ಕುಡಿಯುವ ನೀರು ಪೂರೈಕೆ ಹಾಗೂ ಜಸ್ಕೋ ಸಂಸ್ಥೆಯ ಬಿಲ್ ವ್ಯವಸ್ಥೆಯಲ್ಲಿನ ಗೊಂದಲ, ಖಾಲಿ ಮನೆಗಳಿಗೂ ಬಿಲ್, ಮೀಟರ್ ಬದಲಿಗೆ ಅಂದಾಜು ಬಿಲ್ ನೀಡಿ ಬಡ್ಡಿ ವಿಧಿಸುತ್ತಿರುವ ಬಗ್ಗೆ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದರು.

2008ರಲ್ಲಿ 194.54 ಕೋಟಿ ರೂ.ವೆಚ್ಚದಲ್ಲಿ ಆರಂಭವಾದ ಜೆಎನ್‌ಎನ್‌ಯುಆರ್‌ಎಂ ಕುಡಿಯುವ ನೀರು ಯೋಜನೆಯ ನಿರ್ವಹಣೆ, ನಗರದ 47 ಡಿಎಂಎಗಳ ಪೈಕಿ 42 ಕಡೆ ಮೀಟರ್ ಅಳವಡಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.
ಚಾಮರಾಜ ಕ್ಷೇತ್ರವೊಂದರಲ್ಲೇ 43,510 ಗೃಹ ಬಳಕೆ ನೀರಿನ ಸಂಪರ್ಕಗಳಿಂದ 23.05 ಕೋಟಿ ರೂ. ಅಸಲು ಹಾಗೂ 14.35 ಕೋಟಿ ರೂ. ಬಡ್ಡಿ ಸೇರಿ ಒಟ್ಟು 37.41 ಕೋಟಿ ರೂ. ಬಾಕಿ ಇರುವುದನ್ನು ಪ್ರಸ್ತಾಪಿಸಿದರು. ಖಾಲಿ ನಿವೇಶನ ಹಾಗೂ ಮನೆಗಳಿಗೆ ಬಿಲ್ ವಿಧಿಸುವುದು ಮತ್ತು ತಪ್ಪಾದ ಅಂದಾಜು ಬಿಲ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, 2008ರಿಂದ 2015ರವರೆಗೆ ಜುಸ್ಕೋ ಸಂಸ್ಥೆ ಯೋಜನೆಯನ್ನು ನಿರ್ವಹಿಸಿದ್ದು, ಬಳಿಕ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ ಎಂದರು. ಖಾಲಿ ಸಂಪರ್ಕಗಳಿಗೆ ಡೋರ್ ಲಾಕ್ ಬಿಲ್ ನೀಡಲಾಗುತ್ತಿದೆ. ಬಿಲ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ಜನಸಂಪರ್ಕ ಅದಾಲತ್ ಮೂಲಕ ಪರಿಶೀಲಿಸಿ ಪರಿಹರಿಸಲಾಗುತ್ತಿದೆ ಎಂದು ತಿಳಿಸಿದರು.
ಬಾಕಿ ನೀರಿನ ಬಿಲ್ ಪಾವತಿಗೆ ಅನುಕೂಲವಾಗುವಂತೆ ಒನ್ ಟೈಮ್ ಸೆಟಲ್‌ಮೆಂಟ್(ಒಟಿಎಸ್)ಯೋಜನೆ ಜಾರಿಗೆ ತರುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ. ಅಸಲು ಮೊತ್ತ ಪಾವತಿಸುವ ಗ್ರಾಹಕರಿಗೆ ಬಡ್ಡಿ ಹಾಗೂ ದಂಡ ಮನ್ನಾ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net