ಆಶ್ರಯ ಮನೆ ನಿರ್ಮಾಣ ಸಂಬಂಧ ವರದಿ ಸಲ್ಲಿಸಲು ಶಾಸಕ ಕೆ.ಹರೀಶ್‌ಗೌಡ ತಾಕೀತು
ಚಾಮರಾಜ ಕ್ಷೇತ್ರದ ಆಶ್ರಯ ಸಮಿತಿ ಸಂಬಂಧ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಕೆ.ಹರೀಶ್‌ಗೌಡ, ಜಿ. ಲಕ್ಷ್ಮೀಕಾಂತ ರೆಡ್ಡಿ, ಶೇಖ್ ತನ್ವೀರ್ ಆಸೀಫ್, ಮಹೇಶ್, ದಾಸೇಗೌಡ, ಆಶ್ರಯ ಸಮಿತಿಯ ಸದಸ್ಯರು, ವಲಯಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಿ.31ರೊಳಗೆ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸಿ
ಎರಡು ದಿನಗಳಲ್ಲಿ ದಾಖಲೆಯನ್ನು ನಗರಪಾಲಿಕೆಗೆ ಹಸ್ತಾಂತರಿಸಿ
ಮನೆ, ನಿವೇಶನ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಮೈಸೂರು : ಚಾಮರಾಜ ಕ್ಷೇತ್ರದ ಆಶ್ರಯ ಮನೆ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸುವಂತೆ ಶಾಸಕ ಕೆ.ಹರೀಶ್‌ಗೌಡ, ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚಾಮರಾಜ ಕ್ಷೇತ್ರದ ಆಶ್ರಯ ವಸತಿ ಸಮಿತಿ ಸಂಬಂಧ ನಗರಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಚಾಮರಾಜ ಕ್ಷೇತ್ರ ಆಶ್ರಯ ಯೋಜನೆಗಾಗಿ ಮೈಸೂರು ತಾಲೂಕು ಹಂಚ್ಯಾ ಗ್ರಾಮದ ಸರ್ವೇ ನಂ. 65ರ 24.09 ಎಕರೆ ಜಮೀನಿನ ಪೈಕಿ 23 ಎಕರೆ ಜಮೀನನ್ನು ಚಾಮರಾಜ ಕ್ಷೇತ್ರದ ಆಶ್ರಯ ವಸತಿ ಯೋಜನೆಗೆ ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ ಆಶ್ರಯ ವಸತಿ ಸಮಿತಿ ಸಭೆಯ ನಡವಳಿಯಂತೆ ಜಿ+3 ಮಾದರಿ(1,704)ಯ ಗುಂಪು ಮನೆಗಳನ್ನು ನಿರ್ಮಿಸಲು ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಲು ತಿಳಿಸಲಾಗಿತ್ತು. ಆದರೆ ಸಭೆ ನಡೆದು 13 ತಿಂಗಳು ಕಳೆದರೂ ಇನ್ನು ಯಾವುದೇ ಕ್ರಮ ವಹಿಸಿಲ್ಲ ಎಂದು ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಅಲ್ಲದೆ ಈ ತಿಂಗಳ 31 ರೊಳಗೆ ಡಿಪಿಆರ್ ಪೂರ್ಣಗೊಳಿಸಿ, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದರು.
ಮೈಸೂರು ತಾಲೂಕು ಬಂಡಿಪಾಳ್ಯ ಸರ್ವೇ ನಂ.7ರಲ್ಲಿ ಲಭ್ಯವಿರುವ 6 ಎಕರೆ ಸರ್ಕಾರಿ ಜಮೀನನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಆಶ್ರಯ ವಸತಿ ಯೋಜನೆಯಡಿ ಮಂಜೂರು ಮಾಡಿ ಹಸ್ತಾಂತರಿಸಲು ಸಹ ವಿಳಂಬವಾಗುತ್ತಿದೆ. ಈ ಬಗ್ಗೆ ತಹಸೀಲ್ದಾರ್ ಎರಡು ದಿನಗಳಲ್ಲಿ ದಾಖಲೆಯನ್ನು ನಗರಪಾಲಿಕೆಗೆ ಹಸ್ತಾಂತರ ಮಾಡಬೇಕು ಎಂದು ಹೇಳಿದರು.
ಅಲ್ಲದೆ ಹೆಬ್ಬಾಳು ಸ.ನಂ. 201 ಹಾಗೂ ಶ್ರೀರಾಂಪುರ ಸ.ನಂ. 181 ರಲ್ಲಿ ಲಭ್ಯವಿರುವ ಜಮೀನನ್ನು ಸಹ ಅಳತೆ ಮಾಡಿಸಿ, ನಕ್ಷೆ ಹಾಗೂ ಅಗತ್ಯ ಕಂದಾಯ ದಾಖಲೆಗಳಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಆಶ್ರಯ ವಸತಿ ಯೋಜನೆಗಾಗಿ ಎಂದು ಕಾಯ್ದಿರಿಸಬೇಕು ಎಂದು ನಿರ್ದೇಶನ ನೀಡಿದರು.
ಬೋಗಾದಿ ಆಶ್ರಯ ಬಡಾವಣೆಯಲ್ಲಿ ಹಂಚಿಕೆಯಾಗಿರುವ ಮನೆ ಅಥವಾ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನ್ಯೂ ಕಾಂತರಾಜು ಅರಸು ರಸ್ತೆ ವಿಸ್ತರಣೆಗಾಗಿ ಬೋಗಾದಿ ಆಶ್ರಯ ಬಡಾವಣೆಯ 33 ಮನೆ, ನಿವೇಶನವನ್ನು ಬಳಸಿಕೊಂಡಿದ್ದು, ಸದರಿ 33 ಫಲಾನುಭವಿಗಳಿಗೆ ಕಳೆದ 20 ವರ್ಷಗಳಿಂದ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಮಾಡಿಲ್ಲ. ಈ ಸಂಬಂಧ ಎಂಡಿಎ ಆಯುಕ್ತರಿಗೆ ಪತ್ರ ಬರೆದು ಸಮಸ್ಯೆ ಇತ್ಯಾರ್ಥ ಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಚಾಮರಾಜ ಕ್ಷೇತ್ರದ ಆಶ್ರಯ ವಸತಿ ಯೋಜನೆಯಡಿ ಬೋಗಾದಿ ಆಶ್ರಯ ಬಡಾವಣೆಯಲ್ಲಿ ಹಂಚಿಕೆಯಾಗಿರುವ ಮನೆ- ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನ್ಯೂ ಕಾಂತರಾಜ ಅರಸು ರಸ್ತೆ ಅಗಲೀಕರಣಕ್ಕಾಗಿ ಬೋಗಾದಿ ಆಶ್ರಯ ಬಡಾವಣೆಯ 33 ಮನೆ - ನಿವೇಶನವನ್ನು ಬಳಸಿಕೊಂಡಿದ್ದು, ಸದರಿ 33 ಫಲಾನುಭವಿಗಳಿಗೆ ಕಳೆದ 20 ವರ್ಷಗಳಿಂದ ಪ್ರಾಧಿಕಾರದಿಂದ ನಿವೇಶನ -ಮನೆಯನ್ನು ಹಂಚಿಕೆ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರಾಧಿಕಾರದ ಕಾರ್ಯದರ್ಶಿಗೆ ಸದರಿ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
2002-2003ನೇ ಸಾಲಿನಲ್ಲಿ ಅಯ್ಯಜಯ್ಯನಹುಂಡಿ ಸರ್ವೇ ನಂಬರ್ 17ರಲ್ಲಿ 10 ಎಕರೆ ಜಮೀನನಲ್ಲಿ 264 ನಿವೇಶನಗಳನ್ನು ಮತ್ತು ಕೇರ್ಗಳ್ಳಿ ಸರ್ವೇ ನಂ. 58ರಲ್ಲಿ 5 ಎಕರೆ ಜಮೀನಲ್ಲಿ 214 ನಿವೇಶನಗಳನ್ನು ರಚಿಸಿ ಒಟ್ಟು 478 ಫಲಾನುಭವಿಗಳನ್ನು ಆಯ್ಕೆ ಮಾಡಿ, ಲಾಟರಿ ಮುಖಾಂತರ ಫಲಾನುಭವಿಗಳಿಗೆ ನಿವೇಶನಗಳ ಸಂಖ್ಯೆಯನ್ನು ನೀಡಲಾಗಿದೆ. ಆದರೆ ಅಲ್ಲಿ ಕೆರೆ ಇರುವುರಿಂದ ಆ ಫಲಾನುಭವಿಗಳಿಗೆ ಹಾಗೂ ಶ್ರೀರಾಂಪುರ ಸ.ನಂ.181 ರ ಆಶ್ರಯ ಬಡಾವಣೆಯಲ್ಲಿ 102 ನಿರಾಶ್ರೀತರಿಗೆ ಹಂಚ್ಯದಲ್ಲಿ ನಿರ್ಮಿಸಲಾಗುವ ಜಿ+3 ಮಾದರಿ(1704)ಯ ಗುಂಪು ಮನೆಗಳಲ್ಲಿ ಪರ್ಯಾಯ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಮೈಸೂರು ನಗರಪಾಲಿಕೆಯಿಂದ ಕುಕ್ಕರಹಳ್ಳಿಯಲ್ಲಿ ನಿರ್ಮಿಸಿರುವ 13 ಮಂದಿ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ವಿಚಾರವಾಗಿ ಚರ್ಚಿಸಲಾಯಿತು. 94-95ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ಶತಾಬ್ದಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದ್ದರೂ ಇನ್ನು ಹಕ್ಕುಪತ್ರ ನೀಡಿಲ್ಲ. ಕೂಡಲೇ ಸ್ಥಳ ಮಹಜರು ನಡೆಸಿ ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ತಹಸೀಲ್ದಾರ್ ಮಹೇಶ್, ಪಾಲಿಕೆ ಉಪ ಆಯುಕ್ತ ದಾಸೇಗೌಡ, ಆಶ್ರಯ ಸಮಿತಿಯ ಸದಸ್ಯರು, ಆಶ್ರಯ ಶಾಖೆಯ ಸಿಬ್ಬಂದಿ, ವಲಯ ಕಚೇರಿ-3, 4, 5, 6 ರ ವಲಯಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿ ಇದ್ದರು.