ಎಚ್.ಡಿ. ಕೋಟೆ ತಾಲೂಕಿನ ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಡಾ.ಯತೀಂದ್ರ ಸಿದ್ದರಾಮಯ್ಯ ಬರ ಅಧ್ಯಯನ ನಡೆಸಿದರು.
ಕಬಿನಿ ಹಾಗೂ ನುಗು ಜಲಾಶಯಗಳ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳಿಗೆ ನೀರು ಹರಿಸಿ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಅಭಾವ ನೀಗಲು ಅನುಕೂಲವಾಗಲಿದೆ. ಪ್ರಸ್ತುತ ಹರಿಸಲಾಗುವ ನೀರನ್ನು ಕೃಷಿಗಿಂತ ಹೆಚ್ಚಾಗಿ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆಯಾಗಿ ಬಳಸಬೇಕು ಎಂದು ಸಚಿವರು ಹೇಳಿದರು.
ಯಾವ್ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆಯೋ ಅಲ್ಲೆಲ್ಲ ತಕ್ಷಣ ಹೊಸದಾಗಿ ಕೊಳವೆ ಬಾವಿ ಕೊರೆಯಲು ಸೂಚಿಸಲಾಗಿದೆ. ಕೊಳವೆಬಾಬಿ ವಿಫಲವಾದರೆ ಖಾಸಗಿ ಬೋರವೆಲ್ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಚಾಮನಹಳ್ಳಿಹುಂಡಿ ಗ್ರಾಮದಲ್ಲಿದ್ದ ನೀರಿನ ಸಮಸ್ಯೆಗೆ ಸ್ಪಂದಿಸಿ ಈಗಾಗಲೇ ಎರಡು ನೂತನ ಕೊಳವೆಬಾವಿಗಳನ್ನು ಯಶಸ್ವಿಯಾಗಿ ಕೊರೆಯಲಾಗಿದೆ. ಈ ಕೊಳವೆಬಾವಿಗಳಿಂದ ಮೇಲ್ಮಟ್ಟದ ನೀರಿನ ತೊಟ್ಟಿಗೆ ನೀರು ತುಂಬಿಸಿ, ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರಿಗೆ ಪೂರೈಸುವ ನೀರನ್ನು ಕಡ್ಡಾಯವಾಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಹಾಗೂ ನೀರಿನ ಟ್ಯಾಂಕ್‌ಗಳನ್ನು ನಿರಂತರವಾಗಿ ಶುಚಿಗೊಳಿಸಿ, ಆರೋಗ್ಯಕರ ಕುಡಿಯುವ ನೀರನ್ನು ಪೂರೈಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ತಾರಕ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಪೈಪ್‌ಲೈನ್ ಕಾಮಗಾರಿ ಹಾಗೂ ವಿದ್ಯುತ್ ಸಂಪರ್ಕ ಬಾಕಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ, ಯೋಜನೆಯನ್ನು ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಎಚ್.ಡಿ. ಕೋಟೆ ತಾಲೂಕಿನ ಎಂ. ಕನ್ನೇನಹಳ್ಳಿ ಗ್ರಾಮದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಜಮೀನುಗಳನ್ನು ಪರಿಶೀಲಿಸಿದರು.
ತಾಲೂಕು ಕೃಷಿ ಅಧಿಕಾರಿಗಳು ಮಾತನಾಡಿ, ಏಪ್ರಿಲ್ ಮಾಹೆಯಲ್ಲಿ ಶೇ.93 ರಷ್ಟು ಭಾರಿ ಮಳೆ ಕೊರತೆಯಾಗಿದ್ದು, ಹತ್ತಿ ಬಿತ್ತನೆ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. ನಿರೀಕ್ಷಿತ ಬಿತ್ತನೆ ಗುರಿಯಲ್ಲಿ ಕೇವಲ ಅತ್ಯಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ಮುಸುಕಿನ ಜೋಳ ಹಾಗೂ ಶುಂಠಿ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣ ಒಣಗಿ ಬೆಳೆ ನಾಶವಾಗಿದೆ ಎಂದು ಸಚಿವರಿಗೆ ವರದಿ ನೀಡಿದರು.
ಮಳೆ ಅಭಾವದ ನಡುವೆಯೂ ಬೆಳೆದಿದ್ದ ಮುಸುಕಿನ ಜೋಳದ ಬೆಳೆಗೆ ಫಂಗಲ್ ರೋಗಬಾಧೆ ಆವರಿಸಿದೆ. ಇದರಿಂದಾಗಿ ಬೆಳೆ ಕೈಸೇರುವ ಮುನ್ನವೇ ರೈತರು ದನ-ಕರುಗಳ ಮೇವಿಗಾಗಿ ಕಟಾವು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತರು ಕೇವಲ ಸಾರಜನಕ ಮತ್ತು ರಂಜಕ ಗೊಬ್ಬರಗಳನ್ನು ಬಳಸುತ್ತಿದ್ದು ಪೊಟ್ಯಾಶ್ ಬಳಸದಿರುವುದು ಬೆಳೆಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭ ಸಚಿವರು ಮಾತನಾಡಿ, ರೈತರು ಎಕರೆಗೆ 40 ರಿಂದ 50 ಸಾವಿರ ರೂಪಾಯಿಗಳ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸಮಗ್ರ ಜಮೀನಿನ ಸ್ಯಾಟಲೈಟ್ ಸಮೀಕ್ಷೆ ಹಾಗೂ ಭೌತಿಕ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದ ಮೇಲೆ ಸರ್ಕಾರದಿಂದ ಸೂಕ್ತ ಪರಿಹಾರ ಘೋಷಿಸುವ ಭರವಸೆಯನ್ನು ನೀಡಿದರು.
ಜಿಲ್ಲೆಯ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ತಕ್ಷಣ ಸೂಕ್ತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಗ್ರಾಮಸ್ಥರು ಹಾಗೂ ರೈತರು ವ್ಯಕ್ತಪಡಿಸಿದ ಎಲ್ಲ ಕಷ್ಟ-ನಷ್ಟಗಳ ವಿವರಗಳನ್ನು ಕ್ರೋಢೀಕರಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ರೈತರಿಗೆ ತಿಳಿಸಿದರು.
ಈ ಸಂದರ್ಭ ಅರಣ್ಯ ಮತ್ತು ವಸತಿ ವಿಹಾರಧಾಮಗಳ ಅಧ್ಯಕ್ಷರೂ ಆದ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯೂಕೇಶ್ ಕುಮಾರ್ ಹಾಗೂ ಇತರರು ಇದ್ದರು.