ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ವಿದ್ಯುತ್ 2026’ ಸಾಂಸ್ಕೃತಿಕ ಹಬ್ಬವನ್ನು ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎ.ಎನ್.ಸಂತೋಷ್ ಕುಮಾರ್ ಉದ್ಘಾಟಿಸಿದರು. ಪ್ರೊ.ಸದಾಶಿವ ಗೌಡ, ಗುಂಡಪ್ಪ ಗೌಡ, ಪಿ.ವಿಶ್ವನಾಥ್ ಇನ್ನಿತರರಿದ್ದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎ.ಎನ್.ಸಂತೋಷ್‌ಕುಮಾರ್ ಹೇಳಿಕೆ
ಮೈಸೂರು: ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚುತ್ತಿರುವ ಕಾರಣ ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್‌ನಂತಹ ಸಾಂಪ್ರದಾಯಿಕ ಇಂಜಿನಿಯರಿಂಗ್ ವಿಭಾಗಗಳು ಭರ್ಜರಿಯಾಗಿ ಮರುಜೀವ ಪಡೆಯಲಿವೆ ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎ.ಎನ್.ಸಂತೋಷ್‌ಕುಮಾರ್ ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ವಿದ್ಯುತ್ 2026’ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ದಶಕದಲ್ಲಿ ಕೇವಲ ಐಟಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಈಗ ಕೋರ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರಿಣಿತರ ಕೊರತೆ ಉಂಟಾಗಿದೆ ಎಂದು ತಿಳಿಸಿದರು.
ಇಂದಿನ ಕಂಪನಿಗಳು ತಾಂತ್ರಿಕ ಜ್ಞಾನಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ನಡವಳಿಕೆ ಮತ್ತು ಮನೋಭಾವ ಗಮನಿಸುತ್ತವೆ. ತಾಂತ್ರಿಕ ತರಬೇತಿಯನ್ನು ಕೆಲವೇ ತಿಂಗಳುಗಳಲ್ಲಿ ನೀಡಬಹುದು. ಆದರೆ ವ್ಯಕ್ತಿಯ ಗುಣ ಮತ್ತು ನಡವಳಿಕೆ ಬದಲಾಯಿಸುವುದು ಕಷ್ಟ ಎಂದರು.
ಹೂಡಿಕೆದಾರ ವಾರೆನ್ ಬಫೆಟ್ ಅವರ ಮಾತನ್ನು ನೆನಪಿಸುತ್ತಾ, ಕೌಶಲಕ್ಕಿಂತ ಒಳ್ಳೆಯ ಮನೋಭಾವವೇ ಹೆಚ್ಚು ಬೆಲೆಬಾಳುವಂತದ್ದು ಎಂದರು.
ತಂತ್ರಜ್ಞಾನದ ಪ್ರಗತಿಯ ಬಗ್ಗೆ ಮಾತನಾಡಿದ ಅವರು, ಎಐ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಕ್ಷೇತ್ರಗಳು ಭವಿಷ್ಯದಲ್ಲಿ ದೊಡ್ಡ ಅವಕಾಶ ಸೃಷ್ಟಿಸಲಿವೆ. ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಂದ ತಕ್ಷಣ ಉದ್ಯೋಗಗಳು ನಾಶವಾಗುವುದಿಲ್ಲ ಎಂದು ಭರವಸೆ ನೀಡಿದರು.
ದೀರ್ಘಕಾಲದ ಯಶಸ್ಸು ವ್ಯಕ್ತಿಯ ವ್ಯಕ್ತಿತ್ವ, ಮೌಲ್ಯ ಮತ್ತು ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇವಲ ಹಣ ಸಂಪಾದಿಸುವುದು ಅಥವಾ ಉದ್ಯೋಗ ಪಡೆಯುವುದು ಶಿಕ್ಷಣದ ನಿಜವಾದ ಉದ್ದೇಶವಲ್ಲ. ಮಾನವ ನಡವಳಿಕೆಯನ್ನು ತಿದ್ದಿ ಉತ್ತಮ ವ್ಯಕ್ತಿತ್ವ ರೂಪಿಸುವುದೇ ಶಿಕ್ಷಣದ ಗುರಿ ಎಂದರು.
ಸಮಾಜವು ಬಾಲ್ಯದಿಂದಲೇ ಅಂಕಗಳು ಮತ್ತು ಸಂಬಳವೇ ಯಶಸ್ಸಿನ ಮಾಪನ ಎಂದು ನಂಬಿಸುತ್ತದೆ. ಆದರೆ, ಆರ್ಥಿಕ ಬೆಳವಣಿಗೆಯ ಜತೆಗೆ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಗುಣ ಬೆಳೆಸಿಕೊಳ್ಳುವುದು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸೋಷಿಯಲ್ ಮೀಡಿಯಾ ಮಾಹಿತಿಗಳನ್ನು ನೋಡಿ ತಕ್ಷಣ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ಎಚ್ಚರಿಸಿದ ಅವರು, ವಿಮರ್ಶಾತ್ಮಕವಾಗಿ ಯೋಚಿಸಿ ಪೂರ್ಣ ಮಾಹಿತಿ ಪಡೆದ ನಂತರವೇ ಅಭಿಪ್ರಾಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಪ್ರೊ.ಸದಾಶಿವ ಗೌಡ ಮಾತನಾಡಿ, ಸಂಸ್ಕೃತಿಯು ಸಮಾಜದ ಆತ್ಮವಾಗಿದ್ದು, ಪರಂಪರೆ ಮತ್ತು ಮೌಲ್ಯ ಉಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು.
ಸಾಂಸ್ಕೃತಿಕ ಸ್ಪರ್ಧೆಗಳು, ಗೇಮಿಂಗ್, ಆಟೋ ಎಕ್ಸ್‌ಪೋ, ಫ್ಯಾಶನ್ ಶೋ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮೇ 10ರಂದು ನಡೆಯುವ ಅಂತಿಮ ದಿನದ ಸಮಾರಂಭದಲ್ಲಿ ಗಾಯಕ ರಘು ದೀಕ್ಷಿತ್ ಅವರು ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್ ಉಪಸ್ಥಿತರಿದ್ದರು.