ಹುಣಸೂರು ತಾಲೂಕು ವಾರಂಚಿ ಗ್ರಾಮದಲ್ಲಿ ಡೇರಿ ಕಟ್ಟಡ ಉದ್ಘಾಟನೆ ವೇದಿಕೆ ಸಮಾರಂಭವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಎಂ.ಬಿ.ಸುರೇಂದ್ರ, ಸತೀಶ್ ಪಾಪಣ್ಣ, ಬಸವಲಿಂಗಯ್ಯ, ಶಿವಗಾಮಿ ಇದ್ದರು.
ಹುಣಸೂರು : ತಾಲೂಕಿನ ವಾರಂಚಿ ಗ್ರಾಮದ ಸಾವಿರಾರು ಎಕರೆ ಭೂ ವಿವಾದವನ್ನು ನ್ಯಾಯಯುತವಾಗಿ ಪರಿಹರಿಸಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ವಾರಂಚಿ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ವಾರಂಚಿ ಗ್ರಾಮದ ಸರ್ವೇ ನಂ.3ದಿಂದ 22ರವರೆಗೆ 5 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ನಡುವೆ ಇತ್ತೀಚೆಗೆ ಕೈಗೊಂಡ ದುರಸ್ತ್ತು ಕಾರ್ಯದ ವೇಳೆ ಅರಣ್ಯ ಇಲಾಖೆ ಈ ಭೂಮಿ ಇಲಾಖೆಗೆ ಸೇರಿದ್ದು ಎಂದು ತಗಾದೆ ತೆಗೆದಿದ್ದರೆ, ಇತ್ತ ಮಾಜಿ ಸೈನಿಕರು ಭೂಮಿಯನ್ನು ವಾಪಸು ನೀಡುವಂತೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ವಿಷಯ ತಿಳಿದ ರೈತರು ಆತಂಕಗೊಂಡಿದ್ದು, ಇದಕ್ಕೆ ಪರಿಹಾರ ರೂಪಿಸುವ ದೃಷ್ಟಿಯಲ್ಲಿ ಇತ್ತೀಚೆಗೆ ವನ್ಯಜೀವಿ ವಿಭಾಗದ ಕಚೇರಿಯಲ್ಲಿ ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆದು ರೈತರ ಸಮ್ಮುಖದಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಉನ್ನತಾಧಿಕಾರಿಗಳ ಜತೆಗೂ ಮಾತನಾಡಿದ್ದು, ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ. ಗಜಪಯಣ ಕಾರ್ಯಕ್ರಮದಲ್ಲಿಯೂ ಉಸ್ತುವಾರಿ ಸಚಿವರು ಸೇರಿದಂತೆ ಇಲಾಖೆ ಉನ್ನತಾಧಿಕಾರಿಗಳೊಂದಿಗೆ ಈ ವಿಚಾರ ಪ್ರಸ್ತಾಪಿಸಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ಸ್ಥಾಪಿಸಿ ವಿಚಾರಣೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಸಮಸ್ಯೆಗೆ ಅಂತ್ಯ ಸಿಗಲಿದೆ ಎಂದರು.
ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ.ಸುರೇಂದ್ರ, ಮುಖಂಡ ಸತೀಶ್ ವಿ.ಪಾಪಣ್ಣ, ಶಿವಗಾಮಿ, ಬಸವಲಿಂಗಯ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳಿದ್ದರು.