ಮುಕ್ತಕಗಳಲ್ಲಿ ಶಾಸ್ತ್ರೀಯ ಗಾಂಭೀರ್ಯ ಇಲ್ಲ. ಆದರೆ, ಅಂತರಂಗದ ಸೌಂದರ್ಯ ಇದೆ. ಕಾವ್ಯಮಯ ಗುಣಗಳನ್ನು ಕಾಣಬಹುದು. ಈ ಮುಕ್ತಕಗಳು ಮನುಷ್ಯನ ಮನಸ್ಸನ್ನು ಹಗುರಗೊಳಿಸುವ ಜತೆಗೆ ಜೀವನೋತ್ಸಹ ಮೂಡಿಸುತ್ತವೆ. ಮುಕ್ತಕಗಳು ಮುಕ್ತವಾಗಿ ಹರಡಿದ ಅನುಭವದ ಚಿಂತನೆಗಳು. ಸಂಸ್ಕೃತ ಸಾಹಿತ್ಯದಲ್ಲೂ ಸೂಕ್ತಿ, ಸುಭಾಷಿತ, ಲೋಕೋಕ್ತಿಗಳ ಹೆಸರಲ್ಲಿ ಮುಕ್ತಕಗಳನ್ನು ಕಾಣುತ್ತೇವೆ. ಅವು ಹೆಸರಿನಂತೆಯೇ ಮುಕ್ತವಾಗಿರುತ್ತವೆ. ಭಾವನೆಗಳು ಮುಕ್ತವಾಗಿಸುತ್ತವೆ. ಅವು ಅಂತರಂಗದಲ್ಲಿ ನೋಡುವ ಭಾವನೆಗಳಾಗಿವೆ. ಸಮಾಜದ ಹಿನ್ನೆಲೆಯ ಮುಕ್ತಕಗಳು, ಜನ ಸಾಮಾನ್ಯರ ನೋವು ನಲಿವಿನಲ್ಲಿ ಅರಳಿದ ಮುಕ್ತಕಗಳನ್ನು ಕಾಣಬಹುದು. ಬದುಕಿಗೆ ಸಮಾಧಾನ ತಂದಕೊಡುವ ನಿಟ್ಟಿನಲ್ಲಿ ರಚಿತದ ಮುಕ್ತಕಗಳು ಇವೆ. ಇವುಗಳಲ್ಲಿ ಸಂದೇಶ, ಲೋಕ ಪ್ರೀತಿ, ಲೋಕಕಲ್ಯಾಣದ ಆಶಯಗಳಿವೆ. ಈ ಹಿನ್ನೆಲೆಯಲ್ಲಿ ನಾವು ಕವಿರಾಜಮಾರ್ಗಕಾರನಿಂದಲೂ ಈ ಮುಕ್ತಕಗಳ ಸಾಮ್ರಾಜ್ಯವನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಅದರಲ್ಲೂ ವಿಶೇಷವಾಗಿ ಕುವೆಂಪು, ತೀನಂಶ್ರೀ, ಬಿಎಂಶ್ರೀ, ಡಿವಿಜಿ, ರಾಜರತ್ನಂ, ಸಿಪಿಕೆ ಸೇರಿ ಅನೇಕ ಕವಿಗಳ ಹೃದಯದಲ್ಲಿ ಬಹಳ ಸುಂದರವಾಗಿ ಮೂಡಿ ಬಂದ ಅಮೂಲ್ಯ ಸೌಂದರ್ಯದ ಪುಷ್ಪಗಳು ಈ ಮುಕ್ತಕಗಳು ಎಂದರು.