ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಿದೆ ಎಂದು ಲೇಖಕಿ ಪ್ರೊ.ಅಸ್ನಾ ಉರೂಜ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದೂರದೃಷ್ಟಿ ಅರಿವು ಎಲ್ಲರಿಗೂ ಆಗಬೇಕಿದೆ. ಸಂವಿಧಾನ ಪ್ರತಿಯೊಬ್ಬ ಭಾರತೀಯನೂ ಅರ್ಥೈಸಿಕೊಂಡಾಗಲೇ ಕೋಮು ಸೌಹಾರ್ದ ನೆಲೆಸುತ್ತದೆ. ಸಂವಿಧಾನ ಶಿಕ್ಷಣ ಎಲ್ಲರಿಗೂ ಸಿಗಬೇಕಿದೆ ಎಂದು ತಿಳಿಸಿದರು.
ಎಲ್ಲ ದೇಶದಲ್ಲೂ ಅಲ್ಪಸಂಖ್ಯಾತ ಸಮುದಾಯಗಳಿವೆ. ಕಳೆದ ಜನಗಣತಿಯಲ್ಲಿ ಮುಸ್ಲಿಂ, ಸಿಖ್, ಪಾರ್ಸಿ, ಜೈನ ಹಾಗೂ ಬೌದ್ಧ ಸೇರಿದಂತೆ ಶೇ.20ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಸಂವಿಧಾನವು ಸಮಾನ ಹಕ್ಕು ಮತ್ತು ಸೌಲಭ್ಯಗಳನ್ನು ನೀಡಿರುವಾಗ ನಮ್ಮನ್ನು ಅಲ್ಪಸಂಖ್ಯಾತರೆಂದು ಕರೆದುಕೊಳ್ಳಬೇಕೆ ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಿಗೆ ತಮ್ಮ ಧರ್ಮಕ್ಕಿಂತಲೂ ದೇಶ ಮುಖ್ಯವಾಗಿತ್ತು. ದೇಶ ಮೊದಲು ಎಂಬ ಮನೋಭಾವವನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕಿದೆ ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು. ಸಮುದಾಯದ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯವು 5,300 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, ಇದಕ್ಕೆ ಸರ್ಕಾರವು 13 ಕೋಟಿ ರೂ. ನೀಡಿದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್.ಆನಂದಕುಮಾರ್, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್ ರಾಜ್, ಪ್ರೊ.ಎನ್.ಆರ್.ಚಂದ್ರೇಗೌಡ, ಸಂಯೋಜನಾಧಿಕಾರಿ ಪ್ರೊ.ಮೊಹಮ್ಮದ್ ನಸ್ರುಲ್ಲಾ ಖಾನ್, ಶೈಕ್ಷಣಿಕ ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು, ಸೈಯದ್ ಇಶ್ರತ್ ಫಾತಿಮಾ ಇದ್ದರು.