ಮೈಸೂರಿನಲ್ಲಿ ಫೆ.14ಕ್ಕೆ ಬೃಹತ್ ಹನುಮಾನ್ ಚಾಲೀಸಾ ಪಾರಾಯಣ : ಸಿದ್ಧತೆ ಪರಿಶೀಲನೆ

 ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಕಾರ್ಯಕ್ರಮದ ಸಿದ್ಧತೆಯನ್ನು ಗಣ್ಯರು ಗುರುವಾರ ಪರಿಶೀಲಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಕಾರ್ಯಕ್ರಮದ ಸಿದ್ಧತೆಯನ್ನು ಗಣ್ಯರು ಗುರುವಾರ ಪರಿಶೀಲಿಸಿದರು.
Published on
ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಫೆ.14ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾ ಗಿರುವ ಬೃಹತ್ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ’ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗಿದೆ.
ಈ ಬೃಹತ್ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳು ಮತ್ತು ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಗುರುವಾರ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಕ್ರಮಕ್ಕೆ ಬರುವ ಭಕ್ತರ ಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಲೋಪವಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ, ಸುರಕ್ಷತೆ ಮತ್ತು ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಹಾರಾಜ ಕಾಲೇಜು ಮೈದಾನದ ಪೂರ್ತಿ ಭಾಗಕ್ಕೆ ಶಾಮಿಯಾನ ಹಾಕಲಾಗಿದೆ. ಭಕ್ತರಿಗೆ ಅನುಕೂಲವಾಗುವಂತೆ 45,000 ಕುರ್ಚಿಗಳನ್ನು ಹಾಕಲಾಗಿದೆ. ಭಕ್ತರಿಗೆ ಮಾರ್ಗದರ್ಶನ ನೀಡಲು ಮತ್ತು ವ್ಯವಸ್ಥೆ ನಿರ್ವಹಿಸಲು 800 ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ ಹಾಗೂ ಪ್ರವೇಶ ದ್ವಾರದಲ್ಲಿಯೇ ನೀರಿನ ಬಾಟಲ್ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನ ನಿಲುಗಡೆಗೆ ಅರಸು ಬೋರ್ಡಿಂಗ್ ಶಾಲೆ ಹಾಗೂ ಯುವರಾಜ ಕಾಲೇಜು ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅನ್ನಪ್ರಸಾದಕ್ಕೆ ಯಾವುದೇ ಲೋಪ ಆಗದಂತೆ ಕ್ರಮ ಕೈಗೊಂಡಿದ್ದು ಪಾರಾಯಣ ಸ್ಥಳದಲ್ಲೇ ಅನ್ನಪ್ರಸಾದ ನೀಡಲು ವ್ಯವಸ್ಥೆಗೆ ಕಲ್ಪಿಸಲಾಗಿದೆ. ಇದಲ್ಲದೆ ಅಗ್ನಿ ಶಾಮಕ ವಾಹನ ಹಾಗೂ ಆಂಬುಲೆನ್ಸ್ ವ್ಯವಸ್ಥೆಗಳನ್ನು ಸಹ ಏರ್ಪಡಿಸಲಾಗಿದೆ
ಪರಿಶೀಲನೆ ಸಂದರ್ಭ ಉದ್ಯಮಿ ರಾಮೇಗೌಡ, ಆಶ್ರಮದ ಟ್ರಸ್ಟಿಗಳಾದ ಎಚ್.ವಿ. ಪ್ರಮೋದ್, ರಮೇಶ್, ವಿನಯ ಬಾಬು ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net