ಮೈಸೂರಿನಲ್ಲಿ ನಿಮ್ಹಾನ್ಸ್ ಘಟಕ ಸ್ಥಳಾಂತರಕ್ಕೆ ಒತ್ತಾಯ ಪಾದಯಾತ್ರೆ

ಮೈಸೂರು ತಾಲೂಕು ಗುಡುಮಾದನಹಳ್ಳಿ ಬಳಿ ನಿಮ್ಹಾನ್ಸ್ ಘಟಕ ನಿರ್ಮಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಮೈಸೂರು ತಾಲೂಕು ಗುಡುಮಾದನಹಳ್ಳಿ ಬಳಿ ನಿಮ್ಹಾನ್ಸ್ ಘಟಕ ನಿರ್ಮಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಹಸಿರಾಗಿರುವ ಭೂಮಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಬೇಡ
  • ಉದ್ದೇಶಿತ ಭೂಮಿ ಕೃಷಿಗೆ ಮಾತ್ರ ಯೋಗ್ಯವಾಗಿದ್ದು, ಯಾವುದೇ ಕಟ್ಟಡ ನಿರ್ಮಾಣ ಮಾಡಲು ಯೋಗ್ಯವಲ್ಲ
ಮೈಸೂರು:ಮೈಸೂರು ತಾಲೂಕು ಗುಡುಮಾದನಹಳ್ಳಿ ಬಳಿ ನಿಮ್ಹಾನ್ಸ್ ಘಟಕ ನಿರ್ಮಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಪಾದಯಾತ್ರೆ ನಡೆಯಿತು.
ಎತ್ತಿನಗಾಡಿ, ಜಾನುವಾರಗಳೊಂದಿಗೆ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಗುಡುಮಾದನಹಳ್ಳಿಯಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿರುವ ಮುಖ್ಯಮಂತ್ರಿಗಳ ಜಿಲ್ಲಾಕಚೇರಿ ವರೆಗೆ ಪಾದಯಾತ್ರೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ, ಪರಿಸರವಾದಿಗಳು, ಪ್ರಗತಿಪರರು ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಹಸಿರಾಗಿರುವ ಭೂಮಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಬೇಡ. ಆದ್ದರಿಂದ ಬೇರೆಡೆ ಸೂಕ್ತ ಸ್ಥಳದಲ್ಲಿ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದರು.
ಗುಡುಮಾದನಹಳ್ಳಿ ಗ್ರಾಮದ ಸ. ನಂ.8, 60 ಮತ್ತು 68ರ 36 ಎಕರೆ ವಿಸ್ತೀರ್ಣದ ಪೈಕಿ 20 ಎಕರೆ ಜಮೀನನ್ನು ಸರ್ಕಾರ ನಿಮ್ಹಾನ್ಸ್ ಆಸ್ಪತ್ರೆಗಾಗಿ ಮಂಜೂರು ಮಾಡಿದೆ. ಆದರೆ ಈ ಸ್ಥಳದಲ್ಲಿ 80 ಕುಟುಂಬಗಳು ಕಳೆದ 60-70 ವರ್ಷಗಳಿಂದಲೂ ಸ್ವಾಧೀನಾನುಭವ ಹೊಂದಿ ಬೇಸಾಯ ಮಾಡುತ್ತಿವೆ. ತೆಂಗು ಇತರೆ ತೋಟಗಾರಿಕೆ ಫಸಲು ಮತ್ತು ವಾರ್ಷಿಕ 2 ಫಸಲು ಭತ್ತ ಬೆಳೆಯುತ್ತಿದ್ದಾರೆ. ಈ ಭೂಮಿ ಕೃಷಿಗೆ ಮಾತ್ರ ಯೋಗ್ಯವಾಗಿದ್ದು, ಯಾವುದೇ ಕಟ್ಟಡ ನಿರ್ಮಾಣ ಮಾಡಲು ಯೋಗ್ಯವಲ್ಲ ಎಂದು ಪ್ರತಿಭಟನಾಕರರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಮೈಸೂರಿನ ಹೊರಭಾಗದ ಗೂಡುಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆೆ ಘೋಷಣೆ ಮಾಡಿದರು. ಈ ಪ್ರದೇಶ ವರುಣ ವ್ಯಾಪ್ತಿಯಲ್ಲಿ ಬರುತ್ತಿದ್ದು, ಹಳ್ಳಿ ಹಸಿರು ಪ್ರದೇಶ ಹಾಗೂ ಫಲವತ್ತಾದ ಭೂಮಿ ಹೊಂದಿದೆ. ಆದರಿಂದ ಬೇರೆ ಕಡೆ ನಿಮ್ಹಾನ್ಸ್ ಆಸ್ಪತ್ರೆ ಮಾಡಿ ಎಂದು ಸ್ಥಳೀಯ ರೈತರು ಕಳೆದ 125 ದಿನಗಳಿಂದ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದು,ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೂ ಇನ್ನು ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ದೂರಿದರು.
ಆಸ್ಪತ್ರೆ ನಿರ್ಮಾಣದ ಹೆಸರಿನಲ್ಲಿ ಸರ್ಕಾರ, ಈ ಜಮೀನಿನಲ್ಲಿ ತಲೆ-ತಲಾಂತರದಿಂದ ಸ್ವಾಧೀನಾನುಭವ ಹೊಂದಿರುವ ರೈತ ಕುಟುಂಬವನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಚಳವಳಿಯ ಮೂಲಕವೇ ಜೀವನ ಆರಂಭಿಸಿದವರು. ಅವರಿಗೆ ರೈತರ ನೋವು ಅರ್ಥವಾಗಬೇಕು. ಗುಡುಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಕೈ ಬಿಡದಿದ್ದರೆ ಜೈಲ್ ಭರೋ ಚಳವಳಿ ನಡೆಸಲು ಸಿದ್ದರಾಗಬೇಕು. ರೈತರು ಬದುಕು ನರಕವಾಗುತ್ತಿರುವ ಸಂದರ್ಭದಲ್ಲಿ ಜೈಲೇ ಉತ್ತಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡುವುದು ಸ್ವಾಗತಾರ್ಹವಾಗಿದ್ದು, ಅಭಿವೃದ್ಧಿಗೆ ನಮ್ಮ ಯಾರ ವಿರೋಧವೂ ಇಲ್ಲ. ಆದರೆ ಸೂಕ್ತವಲ್ಲದ ಸ್ಥಳದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಮೈಸೂರು ತಾಲೂಕಿನ ಹೊಸಹುಂಡಿ ಗ್ರಾಮದ ಸ.ನಂ 44ರಲ್ಲಿ 48 ಎಕರೆ, ಚೋರನಹಳ್ಳಿ ಸ.ನಂ:20ರಲ್ಲಿ 10 ಎಕರೆ, ಹಡಜನ ಗ್ರಾಮದ ಸ.ನಂ 149ರಲ್ಲಿ 16 ಎಕರೆ, ವಾಜಮಂಗಲ ಗ್ರಾಮದ ಸ.ನಂ.96 ರಲ್ಲಿ 102 ಎಕರೆ ಸರ್ಕಾರಿ ಜಮೀನಿದೆ. ಅಲ್ಲದೆ ವರುಣಾ ಕ್ಷೇತ್ರದ ಇಮ್ಮಾವು ಗ್ರಾಮದಲ್ಲೂ ಜಮೀನಿದೆ. ಈ ಯಾವುದಾದರು ಒಂದು ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದರು.
ಗುಡುಮಾದನಹಳ್ಳಿಯ ಕೃಷಿ ಜಮೀನಿನಲ್ಲಿ ನಿಮಾನ್ಸ್ ಆಸ್ಪತ್ರೆಗೆ ಭೂಮಿ ಮಂಜೂರು ಮಾಡಿರುವುದನ್ನು ರದ್ದುಪಡಿಸಿ, ಹಸಿರು ವಲಯವನ್ನು ರಕ್ಷಿಸಿ. ಆಸ್ಪತ್ರೆ ನಿರ್ಮಾಣವನ್ನು ಪುನರ್ ಪರಿಶೀಲಿಸಿ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಕಾರ್ಯಾಲಯಾದ ಕತ್ಯರ್ವ್ಯಾಧಿಕಾರಿ ಶಿವಸ್ವಾಮಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಂಯುಕ್ತ ಹೋರಾಟ ಕರ್ನಾಟಕದ ಯಶವಂತ್, ಪರಿಸರ ಬಳಗದ ಪರಶುರಾಮೇಗೌಡ, ದಲಿತ ಸಂಘದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಹೋರಾಟಗಾರರಾದ ಉಗ್ರನರಸಿಂಹೇಗೌಡ, ಸ್ಟ್ಯಾನ್ಲಿ, ಪರಶುರಾಮ್, ಎ.ಎಲ್.ಕೆಂಪೂಗೌಡ, ಭಾನುಮೋಹನ್, ಭಾನು ಪ್ರಶಾಂತ್, ಕಾಳಚನ್ನೇಗೌಡ, ಸವಿತಾ ಮಲ್ಲೇಶ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಮಂಡಕಳ್ಳಿ ಮಹೇಶ್, ನೇತ್ರಾವತಿ, ಪಿ.ಮರಂಕಯ್ಯ, ಬೋರೇಗೌಡ, ಜಿ.ಎನ್.ಕುಮಾರ್, ಚಂದ್ರಕಲಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net