ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಹಲವು ಬದಲಾವಣೆ

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಗರದ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಕೈಗೊಂಡಿರುವ ಸಿದ್ಧತೆ
ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಗರದ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಕೈಗೊಂಡಿರುವ ಸಿದ್ಧತೆ
Published on
ಮೈಸೂರು: ನಗರದ ಚಾಮುಂಡಿಬೆಟ್ಟದಲ್ಲಿ ನಡೆಯಲಿರುವ ಆಷಾಢ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ ದಿನದಂದು ವಾಹನಗಳ ಪಾರ್ಕಿಂಗ್ ಹಾಗೂ ಸಂಚಾರದ ಮೇಲೆ ನಿರ್ಬಂಧ ಮತ್ತು ನಿಯಮಗಳನ್ನು ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಜು.17, 24, 31 ಹಾಗೂ ಆ.7ರ ಆಷಾಢ ಶುಕ್ರವಾರ, ಜು.18, 25, ಆ.1 ಮತ್ತು 8ರ ಆಷಾಢ ಶನಿವಾರ, ಜು.19, 26, ಆ.2 ಮತ್ತು 9ರ ಆಷಾಢ ಭಾನುವಾರ ಹಾಗೂ ಆ.4 ರಂದು ನಡೆಯುವ ಶ್ರೀ ಚಾಮುಂಡೇಶ್ವರಿ ವರ್ಧಂತಿಯಂದು ಈ ಆದೇಶ ಅನ್ವಯ ಆಗಲಿದೆ.
ನಿರ್ಬಂಧಗಳು:
ಪ್ರತಿ ಆಷಾಢ ಶುಕ್ರವಾರದ ಹಿಂದಿನ ದಿನ ಅಂದರೆ ಗುರುವಾರ ದಿನದ ರಾತ್ರಿ 10 ರಿಂದ ಭಾನುವಾರ ರಾತ್ರಿ 11ರವರೆಗೆ ಚಾಮುಂಡಿ ಬೆಟ್ಟಕ್ಕೆ ಎಲ್ಲ ಮಾದರಿಯ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಷಾಢ ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನಗಳಂದು ಚಾಮುಂಡಿಬೆಟ್ಟಕ್ಕೆ ಹೋಗುವ ಭಕ್ತಾದಿಗಳ ವಾಹನಗಳು ಚಾಮುಂಡಿಬೆಟ್ಟದ ತಾವರೆಕಟ್ಟೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಇಂಡಸ್ ವ್ಯಾಲಿ ರಸ್ತೆ ಮೂಲಕ ಚಾಮುಂಡಿಬೆಟ್ಟಕ್ಕೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಭದ್ರತಾ ಶಿಷ್ಟಾಚಾರವಿರುವ ಗಣ್ಯರ ಮತ್ತು ಅತಿ ಗಣ್ಯರ ವಾಹನಗಳು ಮತ್ತು ಸಾರಿಗೆ ಸಂಸ್ಥೆಯ ವಾಹನಗಳನ್ನು ಹೊರತುಪಡಿಸಿ)
ಲಲಿತಾದ್ರಿಪುರದ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಉತ್ತನಹಳ್ಳಿ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮಹಿಷಾಸುರ ಪ್ರತಿಮೆಯ ವಿಐಪಿ ದ್ವಾರದಿಂದ ಚಾಮುಂಡೇಶ್ವರಿ ದೇವಸ್ಥಾನದವರೆಗೆ ಎಲ್ಲ ಮಾದರಿಯ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಬದಲಿ ಮಾರ್ಗ:
ಉತ್ತನಹಳ್ಳಿ ಕಡೆಯಿಂದ ಲಲಿತಮಹಲ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ನಂಜನಗೂಡು ರಸ್ತೆ ಮೂಲಕ ಎಲೆತೋಟ ಜಂಕ್ಷನ್ ರಾಜಹಂಸ ಜಂಕ್ಷನ್-ಎಂ.ಎಲ್.ಸೋಮಸುಂದರಂ ವೃತ್ತ- ಮಹಾರಾಣಾ ಪ್ರತಾಪ ಸಿಂಹ ವೃತ್ತ- ಸಂಗೊಳ್ಳಿ ರಾಯಣ್ಣ ವೃತ್ತ- ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಮೈದಾನವನ್ನು ತಲುಪಬೇಕು.
ಲಲಿತಾದ್ರಿಪುರ ಕಡೆಯಿಂದ ಲಲಿತಮಹಲ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಲಲಿತಮಹಲ್ ರಿಂಗ್ ರಸ್ತೆ ಜಂಕ್ಷನ್- ಸಾವಿತ್ರಿಬಾಯಿಪುಲೆ ವೃತ್ತ- ಎಡ ತಿರುವು- ಟಿ.ನರಸೀಪುರ ರಸ್ತೆ- ಟಿ.ಜಂಕ್ಷನ್ ಮೂಲಕ ಲಲಿತಮಹಲ್ ಮೈದಾನವನ್ನು ತಲುಪುವುದು.

ಪಾರ್ಕಿಂಗ್ ಮಾರ್ಗಸೂಚಿಗಳು:

ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಿ ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಉಚಿತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದೇವಸ್ಥಾನಕ್ಕೆ ತೆರಳಬೇಕು.(ಆಷಾಢ ಶನಿವಾರ ಮತ್ತು ಭಾನುವಾರ ದಿನಗಳಂದು ಉಚಿತ ಬಸ್ ಸೌಲಭ್ಯ ಇರುವುದಿಲ್ಲ)
ಚಾಮುಂಡಿಬೆಟ್ಟಕ್ಕೆ ಹೋಗುವ ಭಕ್ತಾದಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ರಸ್ತೆಯಲ್ಲಿರುವ ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ಸಂಚಾರ ಪೊಲೀಸರು ನೀಡುವ ಸೂಚನೆಯ ಅನುಸಾರ ಕ್ರಮಬದ್ಧವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ಪ್ರತ್ಯೇಕವಾಗಿ ನಿಲುಗಡೆ ಮಾಡತಕ್ಕದ್ದು.
ಭಕ್ತಾದಿಗಳು ವಾಹನಗಳನ್ನು ನಿಲುಗಡೆ ಮಾಡಿದ ಸ್ಥಳದಿಂದ ಚಾಮುಂಡಿಬೆಟ್ಟಕ್ಕೆ ಹೋಗಲು ನಗರ ಸಾರಿಗೆ ಬಸ್‌ಗಳಲ್ಲಿಯೇ ಚಾಮುಂಡಿಬೆಟ್ಟಕ್ಕೆ ಪ್ರಯಾಣ ಮಾಡಬೇಕು ಹಾಗೂ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲೇ ಭಕ್ತಾದಿಗಳ ವಾಹನಗಳು ನಿಲುಗಡೆ ಮಾಡಿರುವ ಲಲಿತಮಹಲ್ ಪಾರ್ಕಿಂಗ್ ಸ್ಥಳಕ್ಕೆ ವಾಪಸ್ ಬಂದು ಸೇರಬೇಕು.
ಚಾಮುಂಡಿಬೆಟ್ಟದ ಮೇಲಿನಿಂದ ಲಲಿತಮಹಲ್ ಪಾರ್ಕಿಂಗ್ ಸ್ಥಳಕ್ಕೆ ವಾಪಸ್ಸು ಬರುವ ಪ್ರಯಾಣಿಕರನ್ನು ಸಾರಿಗೆ ಇಲಾಖೆ ಮತ್ತು ದೇವಸ್ಥಾನ ಆಡಳಿತ ಮಂಡಳಿ ನಿಗದಿಡಿಸಿದ ನಿಲ್ದಾಣಗಳಿಂದ ಹತ್ತಿಸಿಕೊಂಡು ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸಾಗಿ ಐ-ವಾಕ್ ಜಂಕ್ಷನ್-ತಾವರೆಕಟ್ಟೆ-ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಬಲತಿರುವು ಪಡೆದು ಲಲಿತಮಹಲ್ ಮುಖ್ಯ ರಸ್ತೆ ಮೂಲಕ ಲಲಿತಮಹಲ್ ಮೈದಾನದ ನಿಗದಿತ ನಿಲುಗಡೆ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸಬೇಕು.
ಕೆಎಸ್‌ಆರ್‌ಟಿಸಿ ಬಸ್‌ಗಳು ಚಲಿಸುವ ಮಾರ್ಗ:
ಭಕ್ತಾದಿಗಳನ್ನು ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಲಲಿತಮಹಲ್ ಪಾರ್ಕಿಂಗ್ ಮೈದಾನದಿಂದ ಲಲಿತಾದ್ರಿಪುರದ ರಸ್ತೆ- ಐವಾಕ್ ರಸ್ತೆ ಮೂಲಕ ಚಾಮುಂಡಿಬೆಟ್ಟದ ರಸ್ತೆಯನ್ನು ತಲುಪಿ ಚಾಮುಂಡಿಬೆಟ್ಟದ ಮೇಲೆ ಸಾರಿಗೆ ಇಲಾಖೆ ಮತ್ತು ದೇವಸ್ಥಾನ ಆಡಳಿತ ಮಂಡಳಿ ನಿಗದಿಪಡಿಸಿದ ನಿಲ್ದಾಣಗಳಲ್ಲಿಯೇ ಪ್ರಯಾಣಿಕರನ್ನು ಇಳಿಸಬೇಕು.
ಚಾಮುಂಡಿಬೆಟ್ಟಕ್ಕೆ 2000 ರೂ. ದರದ ಟಿಕೆಟ್ ಉಳ್ಳ ಭಕ್ತಾದಿಗಳನ್ನು ಕರೆದುಕೊಂಡು ಹೋಗುವ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ಗಳು ಲಲಿತ ಮಹಲ್ ಮೈದಾನ- ಲಲಿತಾದ್ರಿಪುರ ರಸ್ತೆ- ಕೆ.ಸಿ ಲೇಔಟ್ ಕ್ರಾಸ್‌ನ ಹಳ್ಳಿಹಟ್ಟಿ ಹೋಟೆಲ್ ರಸ್ತೆಯ ಮೂಲಕ ಚಾಮುಂಡಿಬೆಟ್ಟದ ಮುಖ್ಯ ರಸ್ತೆ ತಲುಪಿ ತಾವರೆಕಟ್ಟೆ ಜಂಕ್ಷನ್ ಮುಖಾಂತರ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡಿ ಬೆಟ್ಟ ಬಸ್ ನಿಲ್ದಾಣದ ಬಳಿ ಭಕ್ತಾದಿಗಳನ್ನು ಇಳಿಸಬೇಕು.
ನಗರ ಬಸ್ ನಿಲ್ದಾಣದಿಂದ ಜನರನ್ನು ಕರೆತರುವ ಕೆಎಸ್‌ಆರ್‌ಟಿಸಿ ರೂಟ್ ಬಸ್‌ಗಳು ಸಂಗೊಳ್ಳಿ ರಾಯಣ್ಣ ವೃತ್ತ- ಲಲಿತ ಮಹಲ್ ಹೆಲಿಪ್ಯಾಡ್, ವೈ-ಜಂಕ್ಷನ್ ಬಳಿ ಬಲ ತಿರುವು ಪಡೆದು ನಂತರ ಲಲಿತಾದ್ರಿಪುರ ರಸ್ತೆಯಲ್ಲಿ ಐವಾಕ್ ರಸ್ತೆ ಮುಖಾಂತರ ಚಾಮುಂಡಿಬೆಟ್ಟದ ರಸ್ತೆಯನ್ನು ತಲುಪಿ ಚಾಮುಂಡಿಬೆಟ್ಟದ ಮೇಲೆ ಸಾರಿಗೆ ಇಲಾಖೆ ಮತ್ತು ದೇವಸ್ಥಾನ ಆಡಳಿತ ಮಂಡಳಿ ನಿಗದಿಪಡಿಸಿದ ನಿಲ್ದಾಣಗಳಲ್ಲಿಯೇ ಪ್ರಯಾಣಿಕರನ್ನು ಇಳಿಸಬೇಕು.
ಚಾಮುಂಡಿ ಬೆಟ್ಟದಲ್ಲಿರುವ ನಿವಾಸಿಗಳು ತಮ್ಮ ವಾಹನಗಳಿಗೆ ಅನುಮತಿ ಪಡೆಯಲು ಅಗತ್ಯ ದಾಖಲಾತಿಗಳಾದ ಡಿ.ಎಲ್. ವಾಹನದ ದಾಖಲಾತಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಜೆರಾಕ್ಸ್ ಪ್ರತಿಗಳನ್ನು ಪೊಲೀಸರ ಚೆಕ್ ಪಾಯಿಂಟ್ ಸ್ಥಳಗಳಲ್ಲಿ ಪರಿಶೀಲನೆಗೆ ಒಳಪಡಿಸಬೇಕು ಹಾಗೂ ಪರಿಶೀಲನೆಯ ನಂತರ ಸೂಕ್ತವೆನಿಸಿದ್ದಲ್ಲಿ ಪ್ರವೇಶಕ್ಕೆ ಅನುಮತಿಸಲು ಅವಕಾಶ ನೀಡಲಾಗುವುದು.
ಭಕ್ತಾದಿಗಳು ಬೆಟ್ಟದ ಪಾದದಿಂದ ಮೆಟ್ಟಿಲು ಮುಖಾಂತರ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಹೋಗುವ ಭಕ್ತಾಧಿಗಳು ತಮ್ಮ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಪಿಂಜರಪೋಲ್ ಮುಂಭಾಗದಲ್ಲಿ ಇರುವ ಸ್ಥಳದ ಬಳಿ ಸಂಚಾರ ಪೊಲೀಸರು ಸೂಚಿಸುವ ಸ್ಥಳದಲ್ಲಿ ವ್ಯವಸ್ಥಿತವಾಗಿ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net