ಅಣ್ಣ, ಅತ್ತಿಗೆ ಕೊಲೆಗೈದಿದ್ದವನಿಗೆ ಜೀವಾವಧಿ ಶಿಕ್ಷೆ

Judgment
Judgment
Published on
ಜಮೀನಿನಲ್ಲಿ ವ್ಯವಸಾಯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಣ್ಣ ಮತ್ತು ಅತ್ತಿಗೆ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದ ಅಪರಾಧಿಗೆ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ತಿ.ನರಸೀಪುರ ತಾಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದ ಹನುಮಂತೇಗೌಡ (55) ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ. ಈತ ತನ್ನ ಅಣ್ಣ ಶಿವಲಿಂಗೇಗೌಡ ಮತ್ತು ಅತ್ತಿಗೆ ಭಾರತಿ ಕೊಲೆ ಗೈದಿದ್ದ.
ಏನಿದು ಪ್ರಕರಣ?:
ತಿ.ನರಸೀಪುರ ತಾಲೂಕು, ಬನ್ನೂರು ಹೋಬಳಿ, ನುಗ್ಗಹಳ್ಳಿಕೊಪ್ಪಲಿನ ಗದ್ದೆ ಜಾಡಿನ ರಸ್ತೆಯಲ್ಲಿನ ಗೋಮಾಳಕ್ಕೆ ಸೇರಿದ ಸರ್ವೇ ನಂ.101ರ 20 ಗುಂಟೆ ಜಮೀನನ್ನು ಅಪರಾಧಿ ಹನುಮಂತೇಗೌಡ ಹಿಂದಿನಿಂದ ವ್ಯವಸಾಯ ಮಾಡುತ್ತಿದ್ದ. ಆದರೆ, ಹನುಮಂತನನ್ನು ಹೆದರಿಸಿ ಸದರಿ ಜಮೀನಿನಲ್ಲಿ ಮೃತ ಶಿವಲಿಂಗೇಗೌಡ ಎರಡು ವರ್ಷದಿಂದ ವ್ಯವಸಾಯ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಅಣ್ಣನ ಮೇಲೆ ದ್ವೇಷ ಸಾಧಿಸುತ್ತಿದ್ದ ಹನುಮಂತೇಗೌಡ 2023ರ ಆಗಸ್ಟ್ 29ರಂದು ಮಧ್ಯಾಹ್ನ 3.30ರಿಂದ 4 ಗಂಟೆ ನಡುವಿನ ಅವಧಿಯಲ್ಲಿ ಅಣ್ಣ ಶಿವಲಿಂಗೇಗೌಡ ಮತ್ತು ಅತ್ತಿಗೆ ಭಾರತಿ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ವೇಳೆ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆಗೈದಿದ್ದ. ಈ ಸಂಬಂಧ ಬನ್ನೂರು ಠಾಣೆಯ ಈ ಅಂದಿನ ಆರಕ್ಷಕ ನಿರೀಕ್ಷಕ ಮನೋಜ್ ಕುಮಾರ್ ತನಿಖೆ ಪೂರೈಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಉಷಾರಾಣಿ ತೀರ್ಪು ಪ್ರಕಟಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಎಂ.ಎನ್.ರಂಜನಾರಾವ್ ಸರ್ಕಾರದ ಪರ ವಾದ ಮಂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net