ಗ್ಯಾರಂಟಿ ವಂಚಿತರನ್ನು ನೋಂದಣಿ ಜರೂರಾಗಲಿ: ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್
ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಅರುಣ್‌ಕುಮಾರ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋನೆಗಳ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಎಸ್.ಯುಕೇಶ್ ಕುಮಾರ್, ಯೋಜನಾಧಿಕಾರಿ ಪ್ರಭುಸ್ವಾಮಿ, ಶಿವಕುಮಾರ್, ಹುಣಸೂರು ಬಸವಣ್ಣ, ಬಿ.ಎನ್.ಕರಿಗೌಡ ಇತರರು ಇದ್ದರು.
ಗ್ಯಾರಂಟಿ ಯೋಜನೆ ವಂಚಿತರಾಗಿದ್ದರೆ ಅಂತವರನ್ನು ಯೋಜನೆಯಡಿ ನೊಂದಾಯಿಸಿ ಸೌಲಭ್ಯ ದೊರೆಯುವಂತೆ ಮಾಡಬೇಕು
ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು
ಮೈಸೂರು:ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಯಿಂದ ವಂಚಿತರಾಗಿದ್ದರೆ ಅಂತವರನ್ನು ಯೋಜನೆಯಲ್ಲಿ ನೋಂದಾಯಿಸಲು ಕ್ರಮಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅರ್ಹರು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಬಾರದು. ವಂಚಿತರಾಗಿದ್ದರೆ ಅಂತವರನ್ನು ಯೋಜನೆಯಡಿ ನೊಂದಾಯಿಸಿ ಸೌಲಭ್ಯ ದೊರೆಯುವಂತೆ ಮಾಡಬೇಕು. ಫಲಾನುಭವಿಗಳು ನಿಧನರಾಗಿದ್ದರೆ ಅವರ ಹೆಸರನ್ನು ಕೈಬಿಡಬೇಕು ಎಂದು ಹೇಳಿದರು.
ರಾಜ್ಯಾದ್ಯಂತ ಈಗ ಗೃಹಜ್ಯೋತಿ ಯೋಜನೆಯ ಅಪ್‌ಡೇಟ್ ನಡೆಯುತ್ತಿದ್ದು, ಫಲಾನುಭವಿಗಳ ಹೆಸರು ಕೈತಪ್ಪದಂತೆ ಸೆಸ್ಕ್ ಅಧಿಕಾರಿಗಳು ಗಮನ ಹರಿಸಬೇಕು. ಮೀಟರ್ ರೀಡರ್‌ಗಳು ಮನೆ, ಮನೆಗೆ ಭೇಟಿ ನೀಡಿ ಮಾಹಿತಿ ಹಾಗೂ ದಾಖಲಾತಿಗಳನ್ನು ಅಪ್‌ಡೇಟ್ ಮಾಡಬೇಕು ಎಂದು ಸೂಚಿಸಿದರು.
ಶಕ್ತಿ ಯೋಜನೆಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಸುಗಮ ಉಚಿತ ಬಸ್ ಪ್ರಯಾಣ ಸೌಲಭ್ಯ ಮಹಿಳೆಯರಿಗೆ ದೊರೆಯುತ್ತಿದೆ. ಆದರೆ ನಿಗದಿತ ಪ್ರಮಾಣದಲ್ಲಿ ಬಸ್‌ಗಳ ಸಂಚರಿಸುತ್ತಿಲ್ಲ, ಬಸ್‌ಗಳು ಬಂದರೂ ನಿಲ್ದಾಣಗಳಲ್ಲಿ ನಿಲ್ಲುತ್ತಿಲ್ಲ ಎನ್ನುವ ದೂರಿದೆ. ಬಸ್‌ಗಳನ್ನು ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಈ ಬಗ್ಗೆ ಚಾಲಕರು, ನಿರ್ವಾಹಕರಿಗೆ ನಿರ್ದೇಶನ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹೇಳಿದರು.
ಮೈಸೂರು ತಾಲೂಕು ಇಲವಾಲ ಪೊಲೀಸ್ ಸ್ಟೇಷನ್ ಮುಂಭಾಗ ಬಸ್ ಬೇ ನಿರ್ಮಾಣ ಮಾಡಬೇಕು. ಹೆಚ್ಚಿನ ಜನಸಂದಣಿ ಇರುವ ಕಡೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು, ಶಾಲಾ ಕಾಲೇಜು ಅವಧಿಯಲ್ಲಿ ಹೆಚ್ಚಿನ ಬಸ್‌ಗಳನ್ನು ಬಿಡಬೇಕು ಎಂದು ಹೇಳಿದರು.
ಪಡಿತರ ಆಹಾರ ವಿತರಣೆ ಸಂದರ್ಭದಲ್ಲಿ ತೂಕ ಮತ್ತು ಅಳತೆಯಲ್ಲಿ ಫಲಾನುಭವಿಗಳಿಗೆ ಮೋಸ ಅಗುತ್ತಿದೆ ಎನ್ನುವ ದೂರಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಪಡಿತರದಲ್ಲಿ ನೀಡುವ ಆಹಾರ ಗುಣಮಟ್ಟದಿಂದ ಕೂಡಿರಬೇಕು ಎಂದರು.
ಯುವ ನಿಧಿ ಯೋಜನೆಯಲ್ಲಿ ಹೊಸದಾಗಿ ನೋಂದಣಿಯಾಗಲು ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಟ್ರಾನ್ಸ್‌ಫಾರ್ಮರ್‌ಗಳನ್ನು ಜನಸಂದಣಿ ಇಲ್ಲದ ಜಾಗದಲ್ಲಿ ಅಳವಡಿಸಿಬೇಕು. ಸುರಕ್ಷತಾ ಬೇಲಿಗಳನ್ನು ನಿರ್ಮಾಣ ಮಾಡಬೇಕು ಎಂದ ಅವರು, ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಬೇಕು.
ಮರಣ ಹೊಂದಿದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗಿದ್ದು, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನಿಲ್ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 9,81,299 ಅರ್ಹ ಗ್ರಾಹಕರಿದ್ದು, ಗೃಹ ಜ್ಯೋತಿ ಯೋಜನೆಯಲ್ಲಿ 9,73,321 ನೋಂದಣಿಯಾಗಿದೆ. 7,978 ಜನ ನೋಂದಣಿ ಆಗಬೇಕಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 50,985 ಟ್ರಾನ್ಸ್‌ಪಾರ್ಮರ್‌ಗಳು ಇವೆ. ಅವರಗಳ ಸುರಕ್ಷತೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಧಿಕಾರಿ ವೀರೇಶ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 29 ಅಪಘಾತಗಳು ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಚಾಲಕರ ಅಜಾಗರೂಕತೆಯಿಂದ 22 ಅಪಘಾತಗಳಾಗಿವೆ. ಇದರಲ್ಲಿ 7 ಮರಣ ಸಂಭವಿಸಿವೆ. ಅಪಘಾತಗಳಿಗೆ ಕಾರಣವಾದ ಚಾಲಕರಿಗೆ ಕೌನ್ಸೆಲಿಂಗ್ ಮಾಡಲಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ 34 ಕಂತುಗಳ ಹಣ ಬಿಡುಗಡೆಯಾಗಿದೆ. ಮೇ ಅಂತ್ಯದವರೆಗೆ ಗೃಹಲಕ್ಷ್ಮಿ ಯೋಜನೆಯ ಕಂತುಗಳು ಪಾವತಿಯಾಗಿದೆ. ಮರಣ ಹೊಂದಿದ 5505 ಫಲಾನುಭವಿಗಳಿಗೆ ಜಿಲ್ಲೆಯಲ್ಲಿ ಹಣ ಬಿಡುಗಡೆಯಾಗಿದ್ದು, ಇಂತಹ ಕುಟುಂಬದಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಉಪಾಧ್ಯಕ್ಷರಾದ ಹುಣಸೂರು ಬಸವಣ್ಣ, ಬಿ.ಎನ್.ಕರಿಗೌಡ , ಸದಸ್ಯರಾದ ಸಾ.ಮಾ.ಯೋಗೇಶ್, ಉತ್ತನಹಳ್ಳಿ ಶಿವಣ್ಣ, ಚಾಮರಾಜು, ಚಲುವರಾಜು, ಅಬ್ದುಲ್ ಖಾದರ್ ಇತರರು ಇದ್ದರು.
ಬಿಪಿಎಲ್ ಹಿಂದುರುಗಿಸುವ ಪ್ರಕ್ರಿಯೆ ವಿಳಂಬ
ರದ್ದಾರ ಪ್ರಕರಣದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಮರಳಿ ನೀಡುವಂತೆ ಹೇಳಿದರೂ ಇಲಾಖೆಯಿಂದ ಕಾರ್ಡ್ ಮರಳಿಸುವ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಅರುಣ್‌ಕುಮಾರ್ ಬೇಸರ ವ್ಯಕ್ತಪಡಿಸಿದರು. ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿರುವ ಕುರಿತು ಹಲವು ಪ್ರಕರಣಗಳಲ್ಲಿ ನಾವೇ ಉದಾಹರಣೆ ಮೂಲಕ ತೋರಿಸಿದ್ದೇವೆ. ಆದರೂ ಕಾರ್ಡ್ ತಲುಪಿಸಿಲ್ಲ ಎಂದರು.
ಜಿಲ್ಲೆಯಲ್ಲಿ 23 ಸಾವಿರ ಬಿಪಿಎಲ್ ಕಾರ್ಡ್ ನಾನಾ ಕಾರಣಗಳಿಂದ ಎಪಿಎಲ್ ಅಗಿವೆ. ಆದರೆ, ಅದರಲ್ಲಿ ಅನೇಕರು ಅರ್ಹರು ಇದ್ದು, ಅಂತಹವರ ಮನವಿಗೂ ಶೀಘ್ರ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಬದುಕಿರುವಾಗಲೇ ಮರಣ ಪಟ್ಟಿಗೆ
ಅಧಿಕಾರಿಗಳ ಎಡವಟ್ಟಿನಿಂದ ಬದುಕಿರುವಾಗಲೇ ಮೃತಪಟ್ಟಿದ್ದಾರೆ ಎಂದು ನಮೂದಿಸಿರುವುದರಿಂದ ಗೃಹಲಕ್ಷ್ಮಿ, ಪಡಿತರ ಮಾತ್ರವಲ್ಲದೆ ಪಿಂಚಣಿಯೂ ನಿಂತಿದೆ. ಈ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಗುತ್ತಿಲ್ಲ ಎಂದು ದೂರಿದರು. ಸಿಇಒ ಯುಕೇಶ್ ಕುಮಾರ್ ಇದು ಗಂಭೀರ ಪ್ರಕರಣಗಳಾಗಿದ್ದು, ಇಂತಹವನ್ನು ಗಮನಕ್ಕೆ ತಂದರೆ ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಹೇಳಿದರು.