ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ

ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿಕ ಸಮಾಜ ಸರಗೂರು, ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿದರು.
ಸರಗೂರು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿಕ ಸಮಾಜ ಸರಗೂರು, ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿದರು.
Published on
ಸರಗೂರು: ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ತಹಸೀಲ್ದಾರ್ ಮೋಹನಕುಮಾರಿ ತಿಳಿಸಿದರು.
ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಮಂಗಳವಾರ ಕೃಷಿ ಇಲಾಖೆ, ಕೃಷಿಕ ಸಮಾಜ, ಕೃಷಿ ಪರಿಕರ ಮಾರಾಟಗಾರರ ಸಂಘ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಇಲಾಖೆಯಿಂದ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬೆನ್ನೆಲುಬಾದ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅದರ ಮಾಹಿತಿ ತಿಳಿದು ಬಳಕೆ ಮಾಡಿಕೊಳ್ಳಬೇಕು. ರೈತರ ಏಳಿಗೆಗಾಗಿ ನಾನಾ ಸಂಘ-ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಅಂತಹ ಸಂಸ್ಥೆಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಇದಲ್ಲದೆ ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳು ಕೆಲಸ ಮಾಡುತ್ತಿವೆ. ಅವುಗಳು ನೀಡುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಂಬಾರ ಪದಾರ್ಥಗಳ ಮಂಡಳಿಯ ವಿಜ್ಞಾನಿ ಹರ್ಷ ಮಾತನಾಡಿ, ಸಾಂಬಾರ ಪದಾರ್ಥಗಳಿಗೆ ತುಂಬಾ ಬೇಡಿಕೆ ಇದ್ದು, ಕಾಳು ಮೆಣಸು, ಏಲಕ್ಕಿ, ಚಕ್ಕೆ ಸೇರಿದಂತೆ ಅಡಿಕೆ ಬೆಳೆಗಳಂಥ ತೋಟಗಾರಿಕೆಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಆಗ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿ, ರೈತರು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಪ್ರಸಾದ್ ಮಾತನಾಡಿ, ಇಲಾಖೆಯಿಂದ ರೈತರ ಅನುಕೂಲಕ್ಕೆ ಹತ್ತು-ಹಲವು ಕಾರ್ಯಕ್ರಮಗಳಿದ್ದು, ಅವುಗಳ ಬಗ್ಗೆ ಇಲಾಖೆಯಿಂದ ಅರಿವು ಮೂಡಿಸಲಾಗುತ್ತಿದೆ. ಇದಲ್ಲದೆ ಸರ್ಕಾರ ರೈತರಿಗಾಗಿ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ. ರೈತರು ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಒಂದೇ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬಾರದು. ಬದಲಿ ಕೃಷಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಲ್ಲೂರುಕೆರೆಯ ವೆಂಕಟೇಶ್ವರರಾವ್, ಚಂಗೌಡನಹಳ್ಳಿ ಈಶ್ವರ್, ಸಾಗರೆ ಮಲ್ಲಿಗಮ್ಮ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ನಲ್ಲೂರುಕೆರೆಯ ವೆಂಕಟೇಶ್ವರರಾವ್, ಕೃಷಿಕ ಸಮಾಜ ಸರಗೂರು ಶಾಖೆಗೆ ಕಟ್ಟಡ ನಿರ್ಮಾಣಕ್ಕೆ ಪಟ್ಟಣದಲ್ಲಿ ಒಂದು ಗುಂಟೆ ನಿವೇಶನವನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿದರು. ಕೃಷಿ ಇಲಾಖೆಯ ಅಧಿಕಾರಿ ಸಿದ್ದಪ್ಪಸ್ವಾಮಿ, ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ರಾಕೇಶ್, ಕೃಷಿಕ ಸಮಾಜ ಸರಗೂರು ಅಧ್ಯಕ್ಷ ಶಾಂತವೀರಮೂರ್ತಿ, ಉಪಾಧ್ಯಕ್ಷ ಮಾದೇಗೌಡ, ಸದಸ್ಯರಾದ ಎಂ.ಕೆ.ಹರಿದಾಸ್, ನಾಮಧಾರಿಗೌಡ ಸಂಘದ ಅಧ್ಯಕ್ಷ ಎಚ್.ಡಿ.ರತ್ನಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಪುಟ್ಟಯ್ಯ, ಸಿದ್ದಪ್ಪ, ಹಂಚೀಪುರ ಪುಟ್ಟಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net