ಅವಕಾಶ ಬಳಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ:ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಕಿವಿಮಾತು

ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ.ಶಂಕರ ಅಂಕನಶೆಟ್ಟಿಪುರ, ನಾರಾಯಣ ಅವರನ್ನು ಗೌರವಿಸಲಾಯಿತು. ಡಾ.ಡಿ.ತಿಮ್ಮಯ್ಯ, ಎಚ್.ವಿ.ರಾಜೀವ್, ಎಂ.ಕೆ.ಸೋಮಶೇಖರ್, ಆರ್ಟಿಸ್ಟ್ ಎಸ್.ನಾಗರಾಜು, ರಾಜು ಇತರರು ಇದ್ದರು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ.ಶಂಕರ ಅಂಕನಶೆಟ್ಟಿಪುರ, ನಾರಾಯಣ ಅವರನ್ನು ಗೌರವಿಸಲಾಯಿತು. ಡಾ.ಡಿ.ತಿಮ್ಮಯ್ಯ, ಎಚ್.ವಿ.ರಾಜೀವ್, ಎಂ.ಕೆ.ಸೋಮಶೇಖರ್, ಆರ್ಟಿಸ್ಟ್ ಎಸ್.ನಾಗರಾಜು, ರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೆ ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿ ಇರಬೇಕು ಎನ್ನುವ ಕಾಲ ಇತ್ತು
  • ಈಗ ವ್ಯವಸ್ಥೆ ಸುಧಾರಣೆ ಕಂಡಿದ್ದು, ಸರ್ಕಾರ ತಳ ವರ್ಗದವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ
ಮೈಸೂರು:ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ, ಜಿಲ್ಲಾ ಮತ್ತು ನಗರ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ನೂತನ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನಿಂದ ಜಾತಿ ವ್ಯವಸ್ಥೆ ನಡೆದು ಬಂದಿದ್ದು, ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಿ ಇರಬೇಕು ಎನ್ನುವ ಕಾಲ ಇತ್ತು. ಆದರೆ ಈಗ ವ್ಯವಸ್ಥೆ ಸುಧಾರಣೆ ಕಂಡಿದ್ದು, ಸರ್ಕಾರ ತಳ ವರ್ಗದವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದರು.
ನಿಮ್ಮ ಮಕ್ಕಳು ಪೌರಕಾರ್ಮಿಕರಾಗಬೇಕು ಎಂದು ಬಯಸದೆ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಕಷ್ಟಪಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉನ್ನತ ಶಿಕ್ಷಣ ದೊರೆಯುವಂತೆ ಮಾಡಬೇಕು. ಆಗ ಅವರ ಉನ್ನತ ಹುದ್ದೆಗಳಿಗೆ ಹೋಗಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಬೇರೋರಿರುವ ಜಾತಿ ವ್ಯವಸ್ಥೆ ಹೋಗಬೇಕಿದೆ. ಅದಕ್ಕೆ ಕಾಲ ಕಳೆದಂತೆ ಅಂತರ್ಜಾತಿ ವಿವಾಹ ಕಾರ್ಯ ನಡೆಯುತ್ತಿದ್ದರಷ್ಟೇ ಈ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪೌರಕಾರ್ಮಿಕರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಕಾರ್ಯ ವೈಖರಿಯೇ ಒಂದು ವಿಸ್ಮಯವಾಗಿದ್ದು, ಪೌರಕಾರ್ಮಿಕರ ಹುದ್ದೆ ಖಾಯಂಗೊಳಿಸಿ ಅನುಕೂಲಕ್ಕೆ ಕಾರಣಕಾರ್ತರಾಗಿದ್ದು, ಎಲ್ಲರೂ ಅವರಿಗೆ ಋಣಿಯಾಗಿರಬೇಕು ಎಂದರು.
ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಮಾತನಾಡಿ, ಸರ್ಕಾರ ಆಯೋಗ ರಚಿಸುವ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿ ನೀಡಿತು. ನ್ಯಾಯಾಂಗ ಬಲದ ಆಯೋಗ, ನೊಂದ ಪೌರಕರ್ಮಿಕರಿಗೆ ಬೆಂಬಲವಾಗಿ ನಿಂತಿತ್ತು. ಹಿಂದೆ ಅಧ್ಯಕ್ಷರು ಯಾರು ಎನ್ನುವುದೇ ಗೊತ್ತಿಲ್ಲದ ದಿನಗಳಲ್ಲಿ ನಾನು ಅಧ್ಯಕ್ಷನಾಗಿ ರಾಜ್ಯಾದ್ಯಂತ ಎರಡು ಬಾರಿ ಸಂಚರಿಸಿ ನೊಂದ ಪೌರಕಾರ್ಮಿಕರಿಗೆ ಬೆಂಬಲವಾಗಿ ನಿಂತಿದ್ದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನಮ್ಮ ಪೌರಕಾರ್ಮಿಕರ ಬಹುತೇಕ ಬೇಡಿಕೆ ಈಡೇರಿಸಿದ್ದಲ್ಲದೇ ಹುದ್ದೆ ಖಾಯಂಗೊಳಿಸಿ ಜೀವನದ ದಾರಿ ತೋರಿದರು. ಶಂಕರ್ ಅವರನ್ನು ಆಯೋಗದ ಸದಸ್ಯರನ್ನಾಗಿ ಮಾಡುವಂತೆ ನನ್ನ ಕೋರಿಕೆಗೆ ಮನ್ನಿಸಿ ಸದಸ್ಯರನ್ನಾಗಿ ಮಾಡಿದ್ದಾರೆ ಎಂದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಸಮಾಜದಲ್ಲಿ ಹೋರಾಟ ನಡೆಸದಿದ್ದರೆ ಯಾವುದೇ ಸಮುದಾಯವನ್ನು ಗುರುತಿಸಿಕೊಳ್ಳುವುದು ಕಷ್ಟ. ಆದ್ದರಿಂದ ಸಮುದಾಯಗಳು ಸಂಘಟಿತರಾಗಬೇಕು. ಅಲ್ಲದೇ ಅಂಬೇಡ್ಕರ್ ಹೇಳಿದಂತೆ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಮಕ್ಕಳನ್ನು ವಿದ್ಯಾವಂತರಾಗಿ ಮಾಡುವ ಮೂಲಕ ಬೇರೆ, ಬೇರೆ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕು ಎಂದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಬದುಕಿನ ಹಾದಿ, ಜವಾಬ್ದಾರಿತನ, ಶೈಕ್ಷಣಿಕ ಸಾಧನೆಗಳ ಕುರಿತು ಚಿಂತನೆ ನಡೆಸಬೇಕು. ಆತ್ಮವಿಶ್ವಾಸ ಹಾಗೂ ಮನೋಬಲದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು. ಆದ್ದರಿಂದ ಯಾವುದೇ ಕಾರ್ಯ ಇದ್ದರೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ, ಸಂಘಟನೆ ಆರ್ಟಿಸ್ಟ್ ಎಸ್.ನಾಗರಾಜು, ರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net