ಮೈಸೂರು ತಾಲೂಕುಮಟ್ಟದ ಬಾಲಕರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮಹಾರಾಜ ಪದವಿ ಪೂರ್ವ ಕಾಲೇಜು ತಂಡ. ಡಾ.ಎಲ್.ರಾಮಲಿಂಗಯ್ಯ, ಕೆ.ಆರ್.ಮುರಳೀಧರ್, ಕಾಶಿನಾಥ್, ಎನ್.ಬಿ.ಪರಮಶಿವಮೂರ್ತಿ, ಡಾ.ಕೆ.ಎಸ್.ಅಭಿನಂದನ್, ಡಾ. ಎನ್.ನಕುಲ್, ವಿನಯ್ ಕುಮಾರ್ ಇದ್ದರು.
ಉತ್ತಮ ಪ್ರದರ್ಶನ ನೀಡಿದ ಮಹಾರಾಜ ಪದವಿ ಪೂರ್ವ ಕಾಲೇಜು ತಂಡ 2026-27ನೇ ಮೈಸೂರು ತಾಲೂಕು ಮಟ್ಟದ ಬಾಲಕರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಎಂಆರ್‌ಐಟಿ ಸಹಯೋಗದಲ್ಲಿ ಇತ್ತೀಚೆಗೆ ಎಂಆರ್‌ಐಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫೈನಲ್ ಪಂದ್ಯದಲ್ಲಿ ಮರಿಮಲ್ಲಪ್ಪ ಪಿಯು ಕಾಲೇಜು ತಂಡವನ್ನು 25-17, 25-23 ಅಂಕಗಳಿಂದ ಸೋಲಿಸಿ ಈ ಸಾಧನೆ ಮಾಡಿತು. ಪಂದ್ಯಾವಳಿಯಲ್ಲಿ 35ಕ್ಕೂ ಹೆಚ್ಚು ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಎಂಆರ್‌ಐಟಿ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ನಂದಿನಿ ನರಸಿಂಹಮೂರ್ತಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ತಂಡದ ಮನೋಭಾವ ಬೆಳೆಸುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡಾಪಟುಗಳು ಜಂಕ್ ಫುಡ್‌ನಿಂದ ದೂರವಿದ್ದು, ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕು. ಕ್ರೀಡೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಎಂಆರ್‌ಐಟಿ ಖಜಾಂಚಿ ಡಾ.ಎಲ್.ರಾಮಲಿಂಗಯ್ಯ ಮಾತನಾಡಿ, ಕ್ರೀಡಾಪಟುಗಳು ಗೆಲುವು-ಸೋಲನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ.ನಾಗಮ್ಮ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಆರ್. ಮುರಳೀಧರ್, ಕಾರ್ಯದರ್ಶಿ ಕಾಶಿನಾಥ್, ಕ್ರೀಡಾ ಸಂಚಾಲಕ ಎನ್.ಬಿ. ಪರಮಶಿವಮೂರ್ತಿ, ಪ್ರಾಂಶುಪಾಲ ಡಾ.ಕೆ.ಎಸ್. ಅಭಿನಂದನ್, ಉಪ ಪ್ರಾಂಶುಪಾಲ ಡಾ.ಎನ್.ನಕುಲ್, ದೈಹಿಕ ಶಿಕ್ಷಣ ನಿರ್ದೇಶಕ ವಿನಯ್ ಕುಮಾರ್ ಇದ್ದರು.