ಮಾಹಾಪಾರ್ವತಿ ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವ

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಗ್ರಾಮದೇವತೆ ಮಹಾಪಾರ್ವತಿ ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದರು.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಗ್ರಾಮದೇವತೆ ಮಹಾಪಾರ್ವತಿ ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದರು.
Published on
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಸಮೀಪದ ಕೊತ್ತಲವಾಡಿ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆ ಮಹಾಪಾರ್ವತಿ ಶ್ರೀ ಮಾರಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷವೂ ಗ್ರಾಮದಲ್ಲಿ ಶಕ್ತಿ ದೇವತೆಯಾದ ಮಹಾಪಾರ್ವತಿ ಶ್ರೀ ಅಮ್ಮನವರ ಜಾತ್ರಾ ಮಹೋತ್ಸವವನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಈ ಅಂಗವಾಗಿ ಅಮ್ಮನವರ ದೇವಾಲಯಕ್ಕೆ ಬಣ್ಣ ತುಂಬಿಸಿ ದೇವಾಲಯ ಹಾಗೂ ಪ್ರಮುಖ ಬೀದಿಗಳಲ್ಲಿ ಸ್ವಯಂಚಾಲಿತ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಒಂದು ವಾರ ಮೊದಲೇ ಮನೆಗಳಿಗೆ ಸುಣ್ಣಬಣ್ಣ ತುಂಬಿಸಿ ಶುಚಿಗೊಳಿಸಿ ನಿವಾಸಿಗಳು ಜಾತ್ರೆಗೆ ಬೇರೆ ಊರುಗಳಲ್ಲಿರುವ ತಮ್ಮ ಬಂಧು-ಬಾಂಧವರನ್ನು ಆಹ್ವಾನಿಸಿ ಸಡಗರ ಸಂಭ್ರಮದಿಂದ ಆಚರಿಸಿದರು.
ಸೋಮವಾರ ಸಂಜೆ ಗ್ರಾಮದ ದಾಸೋಹ ಮಠಾಧ್ಯಕ್ಷರಾದ ಗುರುಸ್ವಾಮಿಗಳನ್ನು ಬಿರುದು ಬಾವಲಿಗಳು, ಸತ್ತಿಗೆ ಸೂರಪಾಣಿ ಮುಂತಾದ ಜನಪದ ಕಲಾತಂಡಗಳು ಹಾಗೂ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು.
ಮಂಗಳವಾರ ಬೆಳಗ್ಗೆ ಕಡುವಿನಕಟ್ಟೆ ಹುಂಡಿಯ ಶ್ರೀ ಮಹದೇಶ್ವರ ಕಂಸಾಳೆ ಕಲಾತಂಡವದರಿಂದ ಕಂಸಾಳೆಪದ, ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಉಡೀಗಾಲದ ಹಾಲುಮತಸ್ಥರ ಸಂಘದವರಿಂದ ಗೊರವರ ಕುಣಿತ, ವೀರಭದ್ರೇಶ್ವರಸ್ವಾಮಿ ವೀರಗಾಸೆ, ಡೊಳ್ಳುಕುಣಿತ, ಬ್ಯಾಂಡ್ ವಾದನ, ನಂಜನಗೂಡಿನ ಸಿದ್ದಪ್ಪಾಜಿ ಕಲಾ ಸಂಘದವರಿಂದ ಗಾರುಡಿ ಗೊಂಬೆಗಳ ಜತೆ ಬಸವ ವಾಹನ ಉತ್ಸವವನ್ನು ನಡೆಸಲಾಯಿತು.
ನಾಟಕ ಪ್ರದರ್ಶನ ನಾಳೆ: ಫೆ 13ರ ರಾತ್ರಿ ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗದ ವತಿಯಿಂದ ಪ್ರಭುಲಿಂಗಲೀಲೆ ಅಥವಾ ಅಲ್ಲಮ ಶರಣದ ಸಂದರ್ಶನ ನಾಟಕ ಹಾಗೂ ಫೆ 15ರ ಭಾನುವಾರ ಮರು ಜಾತ್ರೆಯ ಅಂಗವಾಗಿ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net