ನಾಳೆ ಮಹದೇಶ್ವರ ದೇವಾಲಯ ಉದ್ಘಾಟನೆ

 ಹುಣಸೂರು ತಾಲೂಕು ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ  ಶ್ರೀ ಮಹದೇಶ್ವರಸ್ವಾಮಿ ದೇವಾಲಯ.
ಹುಣಸೂರು ತಾಲೂಕು ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಶ್ರೀ ಮಹದೇಶ್ವರಸ್ವಾಮಿ ದೇವಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣ
ಹುಣಸೂರು : ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹದೇಶ್ವರ ದೇವಾಲಯದ ಉದ್ಘಾಟನಾ ಕಾರ್ಯಕ್ರಮವು ಫೆ.6ರಂದು ನಡೆಯಲಿದೆ ಎಂದು ಗ್ರಾಮದ ಯಜಮಾನ ಜಗದೀಶ್ ತಿಳಿಸಿದ್ದಾರೆ.
ಫೆ.5ರಂದು ಗುರುವಾರ ಬೆಳಗ್ಗೆ 11.45ಕ್ಕೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ತತ್ವ ಕಲಶ, ಪ್ರಧಾನ ಉಮಾಮಹೇಶ್ವರ ಕಲಶಾರಾಧನೆ, ಲಕ್ಷ್ಮೀನಾರಾಯಣ ಕಲಶ, ಬ್ರಹ್ಮ ಕಲಶ, ನವಗ್ರಹ ಕಲಶ, ಮಹಾಮೃತ್ಯುಂಜಯ ಕಲಶ, ಸಪ್ತಸಭಾ ಕಲಶ, ಸಪ್ತ ಮಾತೃಕಾ ಕಲಶ, ದಿಕ್ಫಾಲಕ ಕಲಶ ಪ್ರತಿಷ್ಠಾಪಿಸಿ ಈ ದೇವತಾ ಕಲಶಗಳಿಗೆ ಪೂಜಾರಾಧನೆ ಹಾಗೂ ಹೋಮ, ಹವನ, ಪ್ರಧಾನ ಸ್ವಾಮಿಗೆ ಮತ್ತು ಗೋಪುರದ ಶಿಖರ ಕಲಶಕ್ಕೆ ಬಿಂಬಶುದ್ಧಿ, ಜಲಾಧಿವಾಸ, ಶಯನಾದಿವಾಸಗಳ ಪೂಜಾ ಕಾರ್ಯಗಳು ನಡೆಯಲಿವೆ.
ಫೆ.6ರಂದು ದೇವಾಲಯದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮನಾಥೇಶ್ವರ ಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ಜೆಡಿಎಸ್ ಮುಖಂಡರಾದ ಹರವೆ ಶ್ರೀಧರ್, ಹಿರಿಕ್ಯಾತನಹಳ್ಳಿ ಗ್ರಾಪಂ ಅಧ್ಯಕ್ಷೆ ಶಿಲ್ಪಶ್ರೀ, ಉದ್ಯಮಿ ದೇವರಹಳ್ಳಿ ಸೋಮಶೇಖರ್, ಹಿರೀಕ್ಯಾತನಹಳ್ಳಿ ದೊಡ್ಡ ಯಜಮಾನ ಎಚ್.ಆರ್.ಜಗದೀಶ್, ಯಜಮಾನ ಪಾಪಣ್ಣ ಭಾಗವಹಿಸಲಿದ್ದಾರೆ. ಭಕ್ತರಿಗೆ ಮಧ್ಯಾಹ್ನ 1ಗಂಟೆಗೆ ಅನ್ನದಾಸೋಹ ನಡೆಯಲಿದೆ. ರಾತ್ರಿ 8ಗಂಟೆಗೆ ಚಂಡಾಸುರನ ವಧೆ ಅಥವಾ ಹೇಮಾವತಿ ಪರಿಣಯ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net