ಸರಸ್ವತಿಪುರಂ ರೋಟರಿ(ಪಶ್ಚಿಮ) ಸಭಾಂಗಣದಲ್ಲಿ ಆಯೋಜಿಸಿದ್ದ ಕೆ.ರಘು ಶೆಟ್ಟಿ ಅವರ ‘ಕೃಷ್ಣ ಕಾರಣ’ ಮತ್ತು ‘ಉತ್ತಂಗ’ ಕೃತಿಗಳನ್ನು ಕರ್ನಾಟಕ ಆಹಾರ ನಿಗಮದ ವಿಶ್ರಾಂತ ಜಿಲ್ಲಾ ಪ್ರಬಂಧಕ ಮಾ.ವೆಂಕಟರಾಮ್ ಬಿಡುಗಡೆಗೊಳಿಸಿದರು. ಡಾ.ವಿ.ರಂಗನಾಥ್, ಎಸ್.ಸುಬ್ರಮಣ್ಯ, ಬಿ.ಕೆ.ಜಗದೀಶ್, ದಿವಾಕರ ಹೆಗಡೆ ಕೆರೆಹೊಂಡ, ಕೆ.ರಘುಶೆಟ್ಟಿ, ಬಿ.ಜಿ.ರಂಗನಾಥ ಇದ್ದರು.
ಮೈಸೂರು: ಮಹಾಕಾವ್ಯಗಳಾಗಿರುವ ರಾಮಾಯಣ ಮತ್ತು ಮಹಾಭಾರತ ನಡುವೆ ಅನೇಕ ವ್ಯತ್ಯಾಸಗಳಿವೆ. ರಾಮಯಾಣ ಸರಳವಾಗಿ ಅರ್ಥೈಸಿಕೊಳ್ಳಬಹುದು. ಮಹಾಭಾರತವನ್ನು ಅರಿತುಕೊಳ್ಳುವುದು ಬಹಳಷ್ಟು ಕಷ್ಟಕರ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯದ ಸಂಪರ್ಕ ಪ್ರಮುಖ ಡಾ.ವಿ.ರಂಗನಾಥ್ ಅಭಿಪ್ರಾಯಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ, ಎಸ್‌ಬಿಐ ಕನ್ನಡ ಸಂಘ ಸಹಯೋಗದಲ್ಲಿ ಸರಸ್ವತಿಪುರಂ ರೋಟರಿ(ಪಶ್ಚಿಮ) ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆ.ರಘು ಶೆಟ್ಟಿ ಅವರ ‘ಕೃಷ್ಣ ಕಾರಣ’ ಮತ್ತು ‘ಉತ್ತಂಗ’(ದ್ವಿತೀಯ ಮುದ್ರಣ) ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಾಯಣ ಕಥೆ ನೇರವಾಗಿ ಮತ್ತು ಪರೋಕ್ಷವಾಗಿ ಎಲ್ಲರಿಗೂ ಗೊತ್ತು. ಅದು ಸುಲಭವಾಗಿ ಅರ್ಥವಾಗುತ್ತದೆ. ಅದರಲ್ಲಿ ಕೇವಲ 10-15 ಪಾತ್ರಗಳು ಬರುತ್ತವೆ. ಆದರೆ, ರಾಮಾಯಣದಷ್ಟು ಮಹಾಭಾರತ ಸರಳವಲ್ಲ. ಇದರಲ್ಲಿ ಅನೇಕ ಪಾತ್ರಗಳು ಬರುತ್ತವೆ. ಅವುಗಳಿಗೆ ವಿಭಿನ್ನ ಹಿನ್ನೆಲೆ ಇರುತ್ತದೆ ಎಂದರು.
ಈ ಎರಡು ಮಹಾಕಾವ್ಯಗಳು ಧರ್ಮ, ನೈತಿಕತೆ ಮತ್ತು ಕರ್ತವ್ಯದ ವಿಷಯ ಆಧರಿಸಿವೆ. ಆದರೆ, ಅವುಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ರಾಮಾಯಣವು ಆದರ್ಶ ವ್ಯಕ್ತಿಗಳ ಕಥೆಯಾಗಿದ್ದರೆ, ಮಹಾಭಾರತವು ರಾಜ್ಯ ಮತ್ತು ಕುಟುಂಬಗಳ ನಡುವಿನ ಸಂಘರ್ಷ ಮತ್ತು ಅವುಗಳಲ್ಲಿ ಧರ್ಮದ ಪಾತ್ರ ವಿವರಿಸುತ್ತದೆ. ರಾಮಾಯಣವು ಮುಖ್ಯವಾಗಿ ಧರ್ಮದ ಮೇಲೆ ಕೇಂದ್ರೀಕರಿಸುತ್ತದೆ. ಆದರೆ, ಮಹಾಭಾರತವು ಧರ್ಮ ಯುದ್ಧ ಮತ್ತು ಅದರ ಸಂಕೀರ್ಣತೆ ವಿವರಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಆಹಾರ ನಿಗಮದ ವಿಶ್ರಾಂತ ಜಿಲ್ಲಾ ಪ್ರಬಂಧಕ ಮಾ.ವೆಂಕಟರಾಮ್, ಅಭಾಸಾಪ ಜಿಲ್ಲಾಧ್ಯಕ್ಷ ಎಸ್.ಸುಬ್ರಹ್ಮಣ್ಯ, ಉಪಾಧ್ಯಕ್ಷ ಬಿ.ಕೆ.ಜಗದೀಶ್, ಧಾರವಾಡದ ದಿವಾಕರ ಹೆಗಡೆ ಕೆರೆಹೊಂಡ, ಲೇಖಕ ಕೆ.ರಘುಶೆಟ್ಟಿ, ಎಸ್‌ಬಿಐ ಕನ್ನಡ ಸಂಘದ ಕಾರ್ಯದರ್ಶಿ ಬಿ.ಜಿ.ರಂಗನಾಥ ಇದ್ದರು.