ಗ್ರಾಮೀಣ ಹಿಂದುಳಿದ ಕುಟುಂಬಗಳಿಗೆ ಬೆಂಬಲಿಸಿ

ಎಚ್.ಡಿ. ಕೋಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಆದಿವಾಸಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಸೌಮ್ಯಾ ಅನಿಲ್ ಚಿಕ್ಕಮಾದು, ಸಿಡಿಪಿಒ ದೀಪಾ,  ತಹಸೀಲ್ದಾರ್ ಶ್ರೀನಿವಾಸ್, ಲ್ಯಾಪ್ಸ್ ಸೊಸೈಟಿ ಅಧ್ಯಕ್ಷ ಶೈಲೇಂದ್ರ, ನಿರ್ದೇಶಕರಾದ ಪುಟ್ಟಬಸವ, ರವಿ ಇತರರು ಇದ್ದರು.
ಎಚ್.ಡಿ. ಕೋಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಸೌಮ್ಯಾ ಅನಿಲ್ ಚಿಕ್ಕಮಾದು, ಸಿಡಿಪಿಒ ದೀಪಾ, ತಹಸೀಲ್ದಾರ್ ಶ್ರೀನಿವಾಸ್, ಲ್ಯಾಪ್ಸ್ ಸೊಸೈಟಿ ಅಧ್ಯಕ್ಷ ಶೈಲೇಂದ್ರ, ನಿರ್ದೇಶಕರಾದ ಪುಟ್ಟಬಸವ, ರವಿ ಇತರರು ಇದ್ದರು.
Published on
ಆದಿವಾಸಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
ಎಚ್.ಡಿ. ಕೋಟೆ: ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳನ್ನು ಗುರುತಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಸೇವಾಕಾರ್ಯಗಳು ನಡೆಯಬೇಕು ಎಂದು ಸೌಮ್ಯಾ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ಉಪಕೃತಿ ಸೇವಾ ಸಂಸ್ಥೆ ಹಾಗೂ ಕವನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 30 ಆದಿವಾಸಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.ಆದಿವಾಸಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಹಲವು ಸಂಘ-ಸಂಸ್ಥೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡುವ ಮೂಲಕ ಸ್ವಂತ ಉದ್ಯೋಗ ಆರಂಭಿಸಲು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
ಮಹಿಳೆಯರು ಕುಟುಂಬದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಸ್ವಂತ ಆದಾಯ ಗಳಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ಇಂತಹ ಯೋಜನೆಗಳು ಮಹಿಳೆಯರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಿವೆ ಎಂದು ಹೇಳಿದರು.
ಪ್ರಯೋಜನ ಪಡೆದುಕೊಳ್ಳಿ:
ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ದೀಪಾ ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರು ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುಕನ್ಯಾ ಸಮೃದ್ಧಿ ಯೋಜನೆ, ಉದ್ಯೋಗಿನಿ ಯೋಜನೆ, ಹೆರಿಗೆ ಭತ್ಯೆ, ಮಹಿಳಾ ಸಾಂತ್ವನ ಯೋಜನೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗಳು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ. ಮಹಿಳೆಯರು ಈ ಸೌಲಭ್ಯಗಳಿಂದ ಸದೃಢರಾಗಬೇಕು ಎಂದರು.
ಆದಿವಾಸಿ ಸಮುದಾಯಗಳಲ್ಲಿ ಇನ್ನೂ ಕೆಲವೆಡೆ ಬಾಲ್ಯ ವಿವಾಹ ಪದ್ಧತಿ ಕಂಡುಬರುತ್ತಿದೆ. ಇದು ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ
ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಬೆಂಬಲಿಸಬೇಕು ಎಂದರು.
ತಹಸೀಲ್ದಾರ್ ಶ್ರೀನಿವಾಸ್, ಲ್ಯಾಪ್ಸ್ ಸೊಸೈಟಿ ಅಧ್ಯಕ್ಷ ಶೈಲೇಂದ್ರ, ನಿರ್ದೇಶಕರಾದ ಪುಟ್ಟಬಸವ, ರವಿ, ಚಂದನ್, ಸಂತೋಷ್, ಎ.ಡಿ. ವೇಣುಗೋಪಾಲ್, ವಿಜಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net