ಲೇಖಕಿ ಅನುಪಮಾ ಪ್ರಸಾದ್ ಅವರಿಗೆ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾ ನಂದಕುಮಾರ್, ಸ್ವಾಮಿ ಪೊನ್ನಾಚಿ, ಪ್ರೊ.ಸಬೀಹಾ ಭೂಮಿಗೌಡ, ಪ್ರೊ.ಆರ್.ಸುನಂದಮ್ಮ, ಸುಮನಾ ಇದ್ದರು.
ಕವಯತ್ರಿ, ಹೋರಾಟಗಾರ್ತಿ ವಿಜಯಾ ದಬ್ಬೆ ಅವರದು ಯಾರಿಗೂ ಕೇಡು ಬಯಸದ ನಿರ್ಲಿಪ್ತ ಮನಸ್ಸು. ಅವರ ಸಾಹಿತ್ಯದಲ್ಲಿ ಆರ್ಭಟ, ಅಹಂಕಾರ ಇರಲಿಲ್ಲ. ಜೋರಾದ ಪ್ರತಿಭಟನೆ ಕಾಣಲಿಲ್ಲ. ಪ್ರೀತಿ, ಮಮತೆ ಇತ್ತು ಎಂದು ಕವಯತ್ರಿ ಪ್ರತಿಭಾ ನಂದಕುಮಾರ್ ತಿಳಿಸಿದರು.
ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಗೋಕುಲಂ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕಿ ಅನುಪಮಾ ಪ್ರಸಾದ್ ಅವರಿಗೆ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮಹಿಳೆಯರ ಕಾವ್ಯವನ್ನು ಯಾರೂ ವಿಮರ್ಶೆ ಮಾಡುವುದಿಲ್ಲ. ಕಿರಿಯರು ಹಿರಿಯರ ಬರಹಗಳನ್ನು ವಿಮರ್ಶಿಸಬೇಕು. ಕಾವ್ಯ ಕಟ್ಟುವುದು ಮನೆ ಕಟ್ಟುವಂತೆಯೇ ಒಂದು ರಚನೆ. ಆ ಮನೆಯೊಳಗೆ ಜೀವ ಸಂಚಾರ ಆದಾಗ ಮಾತ್ರ ಅದು ಕಾವ್ಯ ಆಗುತ್ತದೆ. ಕವಿತೆ ಎಂಬುದು ಒಂದು ನಿವೇದನೆ. ಭಕ್ತ ಮತ್ತು ದೇವರ ನಡುವಿನ ಸಂಬಂಧ ಇದ್ದಂತೆ ಎಂದು ವಿವರಿಸಿದರು.
ವಿಜಯಾ ನಮಗೆಲ್ಲ ಸ್ತ್ರೀವಾದವನ್ನು ಪರಿಚಯಿಸಿದವರು. ಸ್ತ್ರೀವಾದದ ಪ್ರಖರತೆಯ ಬೆಳಕಾಗಿ ಕಾಣುತ್ತಿರುವಾಗಲೇ ಅಪಘಾತಕ್ಕೆ ಈಡಾದರು. ಹೆಣ್ಣಾಗಿ ಹುಟ್ಟಿದ ತಕ್ಷಣ ಸ್ತ್ರೀವಾದಿ ಆಗುವುದಿಲ್ಲ. ಅದೊಂದು ತಾತ್ವಿಕ ನೆಲೆ. ಸ್ತ್ರೀವಾದಿ ಪುರುಷರೂ ನಮ್ಮ ನಡುವೆ ಇದ್ದಾರೆ ಎಂಬುದು ವಿಜಯಾ ಅವರ ಆಲೋಚನೆ ಆಗಿತ್ತು ಎಂದು ನೆನೆದರು.
ಪ್ರಶಸ್ತಿ ತೀರ್ಪುಗಾರರಾದ ಕತೆಗಾರ ಸ್ವಾಮಿ ಪೊನ್ನಾಚಿ ಮಾತನಾಡಿ, 50-60 ವರ್ಷಗಳ ಹಿಂದೆ ಮಾಧ್ಯಮಗಳು ಇರದ ಕಾಲದಲ್ಲಿ ಮನುಷ್ಯ ಸಂಬಂಧ, ಅಂತಃಕರಣ ಬೆಸುಗೆ ಆಗುತ್ತಿತ್ತು. ಈಗ ಕ್ಷಣಾರ್ಧದಲ್ಲಿ ಒಂದುಗೂಡುವ ಅವಕಾಶ ಇದ್ದರೂ ಮನಸ್ಸು ಛಿದ್ರ ಛಿದ್ರವಾಗಿವೆ. ಮನೆ ಒಳಗಡೆ ಇರಬೇಕಾದ ಧರ್ಮ ಬೀದಿಗೆ ಬಂದಿದೆ. ತಿನ್ನುವ ಆಹಾರವನ್ನು ಪ್ರಶ್ನಿಸಲಾಗುತ್ತಿದೆ. ಸಮಷ್ಠಿ ನೆಲೆಯಿಂದ ವೈಯಕ್ತಿಕ ನೆಲೆಗೆ ಬಂದಿದ್ದೇವೆ. ಇದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಅನುಪಮಾ ಪ್ರಸಾದ್ ಅವರ ಕಥಾ ಸಂಕಲನ ಗಟ್ಟಿ ಕಥಾ ವಸ್ತು, ಸಂಕೀರ್ಣವಾದ, ಕತೆಯೊಳಗೊಂದು ಉಪಕತೆ, ಎಲ್ಲಿಯೂ ತನ್ನ್ನ ತತ ಕಳೆದುಕೊಳ್ಳದ ದಿಟ್ಟತನ ಇದೆ. ಮಹಿಳೆಯರಂತೆ ಈ ಕಾಲದ ಪುರುಷರೂ ಬರೆದ ಕತೆಗಳನನ್ನು ಒಟ್ಟಾಗಿ ಓದಿದಾಗ ವರ್ತಮಾನ ಗ್ರಹಿಸಲು ಸಾಧ್ಯವಾಗುತ್ತದೆ ಎಂದರು.
ಕಾವ್ಯ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶ್ರಾಂತ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಆರ್.ಸುನಂದಮ್ಮ, ಧರ್ಮದರ್ಶಿ ಸುಮನಾ, ಡಾ. ರಾಮಕೃಷ್ಣ ಜೋಷಿ, ಕಲಾಶ್ರೀ, ವೇದಾ ವಿಜಯರಾವ್ ಇತರರು ಇದ್ದರು.