ಪಿರಿಯಾಪಟ್ಟಣ: ಲೈನ್‌ಮನ್‌ಗಳು ಕಾರ್ಯ ನಿರ್ವಹಿಸುವಾಗ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಸೆಸ್ಕ್ ಎಇಇ ಗುರು ಬಸವರಾಜ ಸ್ವಾಮಿ ತಿಳಿಸಿದರು.
ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಲೈನ್‌ಮ್ಯಾನ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ಲೈನ್‌ಗಳು, ಟಿಸಿ ದುರಸ್ತಿ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ವಿದ್ಯುತ್ ಪ್ರವಹಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಲೈನ್‌ಮ್ಯಾನ್‌ಗಳು ದುರಸ್ತಿ ಕೆಲಸಕ್ಕೆ ಮುಂದಾಗಬೇಕು. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮೊದಲಿಗೆ ಸುರಕ್ಷತಾ ವಲಯ ಸೃಷ್ಟಿಸಿಕೊಳ್ಳಬೇಕು. ದುರಸ್ತಿ ಪ್ರದೇಶಕ್ಕೆ ವಿದ್ಯುತ್ ಪ್ರವಹಿಸದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಹಲವು ಸಂದರ್ಭಗಳಲ್ಲಿ ನಿರ್ಲಕ್ಷೃದಿಂದಾಗಿ ಲೈನ್‌ಮನ್‌ಗಳು ಮೃತಪಡುವುದನ್ನು ನೋಡಿದ್ದೇವೆ. ವಿದ್ಯುತ್ ಶಾಕ್‌ನಿಂದಾಗಿ ಹಲವರು ಗಾಯಗೊಂಡಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಹೆಚ್ಚಿನ ಜಾಗೃತೆ ವಹಿಸಬೇಕು ಎಂದು ತಿಳಿಸಿದರು.
ಕೆಲಸಕ್ಕೆ ಸರ್ಕಾರವೇ ಉತ್ತಮ ವೇತನ ನೀಡುತ್ತಿದ್ದು, ಲೈನ್‌ಮನ್‌ಗಳು ಆರ್ಥಿಕ ಶಿಸ್ತು ಹೊಂದಿರಬೇಕು. ದುಂದುವೆಚ್ಚ ಮಾಡದಂತೆ ಉಳಿತಾಯದ ಮನೋಭಾವನೆಯನ್ನು ಪ್ರತಿಯೊಬ್ಬರೂ ಹೊಂದಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಎಂಜಿನಿಯರ್‌ಗಳಾದ ಸುನಿಲ್ ಯಾದವ್, ಶಶಿಕುಮಾರ್ ಮಾತನಾಡಿದರು. ತಾಂತ್ರಿಕ ಸಹಾಯಕ ಎಂಜಿನಿಯರ್ ಮನೋಹರ್, ಶಾಖಾಧಿಕಾರಿಗಳಾದ ರಮೇಶ್ ಬಾಬು, ಚಂದ್ರಶೇಖರ್, ವಿಜಯಕುಮಾರ್, ತಾಲೂಕು ಲೈನ್‌ಮ್ಯಾನ್ ಗಳ ಸಂಘದ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಲೋಕೇಶ್ ಇದ್ದರು.