ಆಹಾರ ಸುರಕ್ಷತೆ ನಿರ್ಲಕ್ಷ್ಯಸಿದರೆ ಪರವಾನಗಿ ರದ್ದು

 ನಗರದಲ್ಲಿ ಶುಕ್ರವಾರ ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸಭೆ ನಡೆಸಿದರು. ಯುಕೇಶ್ ಕುಮಾರ್, ಸೋಮಶೇಖರ್, ಡಾ.ರವೀಂದ್ರ, ಕಾಂತರಾಜು ಇನ್ನಿತರರಿದ್ದರು.
ನಗರದಲ್ಲಿ ಶುಕ್ರವಾರ ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸಭೆ ನಡೆಸಿದರು. ಯುಕೇಶ್ ಕುಮಾರ್, ಸೋಮಶೇಖರ್, ಡಾ.ರವೀಂದ್ರ, ಕಾಂತರಾಜು ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಡಿಸಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಾಕೀತು
  • ಸುರಕ್ಷತೆ ಕ್ರಮ ಅನುಸರಿಸದಿದ್ದಲ್ಲಿ ನೋಟಿಸ್ ಜಾರಿ ಮಾಡಿ, ದಂಡ ವಿಧಿಸಿ
ಮೈಸೂರು: ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಒಂದು ತಿಂಗಳು ವಿಶೇಷ ತಪಾಸಣೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಆಹಾರ ಸುರಕ್ಷತಾ ಅಧಿಕಾರಿಗಳು ಮೈಸೂರು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಆರೋಗ್ಯ ಅಧಿಕಾರಿಗಳೊಂದಿಗೆ ತಪಾಸಣೆ ಸಂದರ್ಭದಲ್ಲಿ ಭಾಗಿಯಾಗಬೇಕು. 
ಸುರಕ್ಷತೆ ಕ್ರಮ ಅನುಸರಿಸದಿದ್ದಲ್ಲಿ ಕೂಡಲೇ ನೋಟಿಸ್ ಜಾರಿ ಮಾಡಿ, ದಂಡ ವಿಧಿಸಿ ಸ್ಥಳೀಯ ಸಂಸ್ಥೆಗಳು ನೀಡುವ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಶಿಫಾರಸು ಮಾಡಬೇಕು. ಬೀದಿಬದಿ ಆಹಾರ ವ್ಯಾಪಾರ ಮಾಡುವವರು ಸೇರಿದಂತೆ ಸ್ಟಾರ್ ಹೋಟೆಲ್‌ಗಳಲ್ಲಿ ಅನುಮಾನ ಬರುವ ಎಲ್ಲ ಕಡೆಗಳಲ್ಲೂ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.
ಪರವಾನಗಿ ಪಡೆದ ಸಂದರ್ಭದಲ್ಲಿ ಸರ್ಕಾರ ಸೂಚಿಸುವ ಎಲ್ಲ ನಿಯಮ ಪಾಲಿಸಬೇಕು. ಅನಾಹುತ ನಡೆದ ನಂತರ ಕ್ರಮಗಳ ಬಗ್ಗೆ ಚಿಂತಿಸುವ ಬದಲು ಮೊದಲೇ ಕಾರ್ಯಪ್ರವೃತ್ತರಾಗಿ, ವಿವಿಧ ಕಡೆ ಪರಿಶೀಲನೆ ನಡೆಸಿ ಪ್ರತಿ ದಿನ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು.
 ಬೀದಿಬದಿ, ಸಣ್ಣ-ದೊಡ್ಡ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಆರೋಗ್ಯಯುತ ಆಹಾರ ನೀಡುವುದು ಮಾಲೀಕರ ಕರ್ತವ್ಯವಾಗಿದೆ. ಮಾರಾಟಗಾರರು ಗ್ರಾಹಕರ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ನಿಷೇಧಿತ ಪದಾರ್ಥಗಳನ್ನು ಬಳಸಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಾಲಕಾಲಕ್ಕೆ  ಸರ್ಕಾರದಿಂದ ನೀಡಲಾಗುವ ನಿರ್ದೇಶನ ಪಾಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಆಹಾರ ಸುರಕ್ಷತಾ ಅಧಿಕಾರಿಗಳಾದ  ಡಾ ರವೀಂದ್ರ, ಕಾಂತರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net