ಮೈಸೂರು: ಸಂವಿಧಾನವೇ ಶ್ರೇಷ್ಠ ಗ್ರಂಥ. ಸಮಸ್ತ ಭಾರತೀಯರು ಒಂದೇ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಸಂವಿಧಾನವೇ ಕಾರಣ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜ್ಞಾಪಕಾರ್ಥವಾಗಿ ಹಾಗೂ ಕರ್ನಾಟಕ ರಾಜ್ಯ ಭೀಮ್ ಸೇನೆ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು. ಅವರ ಕಂಡಿದ್ದ ಕನಸನ್ನು ನನಸು ಮಾಡಲು ನಾವೆಲ್ಲರೂ ಹೋರಾಟ ಮಾಡಬೇಕಿದೆ. ಅಂಬೇಡ್ಕರ್ ಅವರಿಗೆ ಅರ್ಥಶಾಸ್ತ್ರದ ಮೇಲೆ ವಿಶೇಷ ಆಸಕ್ತಿ. ಅವರು ಮೊದಲು ಪಿಎಚ್.ಡಿ ಮಾಡಿದ್ದು ಅರ್ಥಶಾಸ್ತ್ರದಲ್ಲಿ. ಅವರ ಆರ್ಥಿಕ ಚಿಂತನೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಭಾರತೀಯರ ದೃಷ್ಟಿಕೋನದಿಂದ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿ ಮಾಡಬೇಕು. ಆರ್ಥಿಕ ಪರಿಸ್ಥಿತಿ ಎಷ್ಟು ಉದ್ಯೋಗ ಸೃಷ್ಟಿ ಮಾಡಬಹುದು ಎಂದು ಅವಲಂಬಿಸಿದ್ದೇವೆ. ಇಂತಹ ವ್ಯವಸ್ಥೆಗಳ ಮೂಲಕ ಅಂಬೇಡ್ಕರ್ ತತ್ವಗಳು ಪಾಲನೆಯಾಗಬೇಕಿದೆ ಎಂದರು.
ಮಾಜಿ ಮಹಾಪೌರ ಪುರುಷೋತ್ತಮ್ ಮಾತನಾಡಿದರು. ಮೈಸೂರು ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು, ಕರ್ನಾಟಕ ರಾಜ್ಯ ಭೀಮ್ ಸೇನೆ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಸರ್ವೇಶ್, ಮಹಿಳಾ ಅಧ್ಯಕ್ಷೆ ಪದ್ಮವತಿ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ನಯಜ್ ಪಾಷಾ, ಉಪಾಧ್ಯಕ್ಷ ಅಜ್ಮಲ್ ಇತರರಿದ್ದರು.