ಮಹಿಳೆಯರು ಆತ್ಮಸ್ಥೈರ್ಯದಿಂದ ಮುನ್ನುಗ್ಗಲಿ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹಿಳಾ ನಾಯಕತ್ವ’ ಕುರಿತು ಕಾರ್ಯಾಗಾರವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಭವ್ಯಾ ನರಸಿಂಹಮೂರ್ತಿ, ಡಾ.ಬಿ.ಜೆ.ವಿಜಯ್ ಕುಮಾರ್, ಧನರಾಜ್ ತಾಳಂಪಳ್ಳಿ, ಎನ್.ಸಿದ್ದಯ್ಯ, ತಾರಾ ಕುಮಾರ್ ಗೌಡ ಇನ್ನಿತರರಿದ್ದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹಿಳಾ ನಾಯಕತ್ವ’ ಕುರಿತು ಕಾರ್ಯಾಗಾರವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಭವ್ಯಾ ನರಸಿಂಹಮೂರ್ತಿ, ಡಾ.ಬಿ.ಜೆ.ವಿಜಯ್ ಕುಮಾರ್, ಧನರಾಜ್ ತಾಳಂಪಳ್ಳಿ, ಎನ್.ಸಿದ್ದಯ್ಯ, ತಾರಾ ಕುಮಾರ್ ಗೌಡ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭವ್ಯಾ ನರಸಿಂಹಮೂರ್ತಿ ಕರೆ
  • ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ
  • ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿಕೊಡುವ ಚಿಂತನೆ
ಮೈಸೂರು: ದೇಶದ ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರು ಆತ್ಮಸ್ಥೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಸಾಧನೆ ಸಾಧ್ಯ ಎಂದು ಎಐಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಸಹಕಾರ ವಿಭಾಗದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ‘ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮಹಿಳಾ ನಾಯಕತ್ವ’ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ಇಂದಿರಾ ಗಾಂಧಿಯವರು ದೀರ್ಘಾವಧಿ ಪ್ರಧಾನಮಂತ್ರಿಯಾಗಿ ಇಡೀ ಮಹಿಳಾ ಸಮುದಾಯವನ್ನು ಪ್ರತಿನಿಧಿಸಿ ಮಹಿಳೆ. ಅವರು ಪುರುಷರಷ್ಟೇ ಸಮಾನ ಧೈರ್ಯವನ್ನು ಮಹಿಳೆಯರು ಹೊಂದಿದ್ದಾರೆ ಎಂಬ ಸಂದೇಶವನ್ನು ಸಾರಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರ ಸರಿಸಮಾನರಾಗಿ ಹೋರಾಡಿದ ಹೆಗ್ಗಳಿಕೆ ಮಹಿಳೆಯರಿಗೆ ಸಲ್ಲುತ್ತದೆ ಎಂದರು
ಇದೀಗ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಿಕೊಡುವ ಚಿಂತನೆ ಇದೆ. ಈ ಹಿನ್ನೆಲೆಯಲ್ಲಿ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಲು ತಯಾರಿ ನಡೆಸಬೇಕು ಎಂದು ಕರೆ ನೀಡಿದರು.
 ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮಹಿಳಾ ಸಬಲೀಕರಣ ದೇಶದ ಸಬಲೀಕರಣ ಎಂದು ಅಂಬೇಡ್ಕರ್, ಗಾಂಧಿ ಹೇಳಿದ್ದರು. ಇವರೆಲ್ಲರೂ ಕಂಡಿದ್ದ ಕನಸು ಇಂದು ನನಸಾಗುವ ಸಂದರ್ಭ ಸೃಷ್ಟಿಯಾಗಿದೆ. ಹೆಣ್ಣು ಕುಟುಂಬದ ಕಣ್ಣು ಎಂಬ ಮಾತಿನಂತೆ ಸಂಸಾರವನ್ನು ಸಾಗಿಸುವ ಜವಾಬ್ದಾರಿ ಹೆಣ್ಣಿನ ಕೈಯಲ್ಲಿದೆ. ಅಂತಹ ಕೈಗಳಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದರು. 
ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳ ಮಹತ್ವ ಹೆಣ್ಣು ಮಕ್ಕಳಿಗೆ ಮಾತ್ರ ಸೂಕ್ಷ್ಮವಾಗಿ ಅರ್ಥ ಆಗುತ್ತವೆ. ಯಾಕೆಂದರೆ ಮನೆಯ ಜವಾಬ್ದಾರಿ ಹೊತ್ತ ಹೆಣ್ಣಿಗೆ ಮಾತ್ರ ಅದರ ಕಷ್ಟ ಅರಿವಾಗುತ್ತದೆ. ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳ ಅನುಗುಣವಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜೋತಿ ಯೋಜನೆ ನೀಡಿದ್ದು ಮಹಿಳೆಯ ಮೂಲ ಅಗತ್ಯತೆ ಪೂರೈಸುವ ಯೋಜನೆಯಾಗಿದೆ ಎಂದರು.
 ಪ್ರತಿ ತಾಲೂಕುಗಳಲ್ಲಿ ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿಕೊಂಡಿದ್ದು, ಅದರಿಂದ ಮಹಿಳಾ ವರ್ಗವು ಸಬಲೀಕರಣಗೊಂಡು ತಾತ್ವಿಕವಾಗಿ ಬೆಳೆಯಬೇಕು ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಅಧ್ಯಕ್ಷ ಧನರಾಜ್ ತಾಳಂಪಳ್ಳಿ, ಸಹಕಾರ ವಿಭಾಗದ ಮೈಸೂರು ಜಿಲ್ಲಾಧ್ಯಕ್ಷ ಎನ್.ಸಿದ್ದಯ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ತಾರಾ ಕುಮಾರ್ ಗೌಡ, ಸಹಕಾರ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಗೌಡ, ಡಿಸಿಸಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net