ಸಮಾಜಮುಖಿ ಚಿಂತನೆಗಳೊಂದಿಗೆ ಸಂಘ ಅಸ್ತಿತ್ವಕ್ಕೆ ಬರಲಿ:ಹಿ.ಬೂ.ರಮೇಶ್ ಆಶಯ

ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿ.ಟಿ.ವೀರಪ್ಪ, ತಿಮ್ಮೇಗೌಡ, ಎನ್.ಕೆ.ಲೋಲಾಕ್ಷಿ, ಯೋಗೇಶ್ ಇತರರು ಇದ್ದರು.
ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿ.ಟಿ.ವೀರಪ್ಪ, ತಿಮ್ಮೇಗೌಡ, ಎನ್.ಕೆ.ಲೋಲಾಕ್ಷಿ, ಯೋಗೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು
  • ಶತಮಾನದ ಇತಿಹಾಸವಿರುವ ಈ ಸಂಸ್ಥೆಗೆ ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಲು ಸಂಘ ಒಂದು ವೇದಿಕೆಯಾಗಿದೆ
ಮೈಸೂರು:ಸಮಾಜಕ್ಕೆ ಗಣ್ಯಾತಿಗಣ್ಯರನ್ನು ಕೊಡುಗೆ ನೀಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಈಗ ಮತ್ತೊಂದು ಮಜಲಿನತ್ತ ಹೊರಳಿದ್ದು, ಇದಕ್ಕೆ ಪೂರಕವಾಗಿ ಸಮಾಜಮುಖಿ ಚಿಂತನೆಗಳೊಂದಿಗೆ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವ ಬರಬೇಕು ಎಂದು ಹಿರಿಯ ವಿದ್ಯಾರ್ಥಿ ಹಿ.ಬೂ.ರಮೇಶ್ ಹೇಳಿದರು.
ನಗರದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು. ಅದಕ್ಕೆ ಹಳೇ ವಿದ್ಯಾರ್ಥಿಗಳನ್ನು ಕಲಿತ ಕಾಲೇಜಿನ ಜತೆ ಬೆಸೆಯಲು ವಿದ್ಯಾರ್ಥಿ ಸಂಘ ಅಗತ್ಯ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ 1927ರ ಜುಲೈ ಒಂದರಂದು ಕನ್ನಡ ಸ್ನಾತಕೋತ್ತರ ವಿಭಾಗವಾಗಿ ಆರಂಭಗೊಂಡು ಬಳಿಕ ಪ್ರತ್ಯೇಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಈಗ ಶತಮಾನದ ಹೊಸ್ತಿಲಿನಲ್ಲಿದೆ. ಶತಮಾನದ ಇತಿಹಾಸವಿರುವ ಈ ಸಂಸ್ಥೆಗೆ ಹಿರಿಯ ವಿದ್ಯಾರ್ಥಿಗಳು ಒಂದೆಡೆ ಸೇರಲು ಸಂಘ ಒಂದು ವೇದಿಕೆಯಾಗಿದೆ ಎಂದರು.
ಕೆಲವೊಮ್ಮೆ ಹಿರಿಯ ವಿದ್ಯಾರ್ಥಿಗಳು ಸಂಘಗಳನ್ನು ಕಟ್ಟಿಕೊಂಡು ಒಂದಿಷ್ಡು ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರೂ ಅದು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗುತ್ತಿರುವ ಉದಾಹರಣೆ ಇವೆ. ಆದರೆ ಇದು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಸಂಶೋಧನಾ ವಿದ್ಯಾರ್ಥಿ ಮೂರ್ತಿ ಮಾತನಾಡಿ, ಗುರು, ಹಿರಿಯರ ಮಾರ್ಗದರ್ಶನದಲ್ಲಿ ನಮಗೆ ನೀಡಿದ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹೊರಗೆ ಇರುವುದರಿಂದ ಎಲ್ಲರನ್ನೂ ಒಂದೆಡೆ ಸೇರಿಸಿ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ. ಸಂಘದ ಸದಸ್ಯತ್ವ ಕಾರ್ಯವೂ ಪ್ರಗತಿಯಲ್ಲಿದೆ. ಹಿರಿಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪ್ರಸ್ತುತ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಲಾಗುವುದು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಎನ್.ಕೆ.ಲೋಲಾಕ್ಷಿ, ಹಿರಿಯ ವಿದ್ಯಾರ್ಥಿಗಳಾದ ಮಂಡ್ಯ ಪಿಇಎಸ್ ಕಾಲೇಜಿಕ ನಿವೃತ್ತ ಪ್ರಾಧ್ಯಾಪಕ ಜಿ.ಟಿ.ವೀರಪ್ಪ, ಮಹಾಜನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ತಿಮ್ಮೇಗೌಡ, ಯೋಗೇಶ್ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net