ಕಾಡಂಚಿನ ಜನರು ಮುನ್ನಚ್ಚರಿಕೆ ವಹಿಸಲಿ

ಸರಗೂರು ತಾಲೂಕಿನ ಹಳೆಹೆಗ್ಗುಡಿಲು ಗ್ರಾಮದಲ್ಲಿ ಜನ ಜಾನುವಾರಗಳ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸುಮಿತ್ರಾ, ಚಂದನಗೌಡ, ಶಿವಕುಮಾರ್, ಶಿವಲಿಂಗ ಇತರರು ಇದ್ದರು.
ಸರಗೂರು ತಾಲೂಕಿನ ಹಳೆಹೆಗ್ಗುಡಿಲು ಗ್ರಾಮದಲ್ಲಿ ಜನ ಜಾನುವಾರಗಳ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸುಮಿತ್ರಾ, ಚಂದನಗೌಡ, ಶಿವಕುಮಾರ್, ಶಿವಲಿಂಗ ಇತರರು ಇದ್ದರು.
Published on
ಸರಗೂರು : ಹುಲಿ ಅಥವಾ ಆನೆಗಳ ದಾಳಿಯನ್ನು ಒಂದು ಪ್ರಾಕೃತಿಕ ವಿಕೋಪ ಎಂದು ಭಾವಿಸಬೇಕೆ ಹೊರತು ಕೋಪದಲ್ಲಿ, ಆವೇಶದಲ್ಲಿ ಯಾರು ಕೂಡ ಕಾನೂನು ಕೈಗೆತ್ತಿಕೊಂಡು ಅಶಾಂತಿ ಉಂಟು ಮಾಡಬಾರದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ರಾ ತಿಳಿಸಿದರು.
ತಾಲೂಕಿನ ಹಳೆಹೆಗ್ಗುಡಿಲು ಗ್ರಾಮದಲ್ಲಿ ಗುರುವಾರ ಅರಣ್ಯ ಇಲಾಖೆ ಮತ್ತು ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಜನ-ಜಾನುವಾರುಗಳ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆಯೂ ಅರಣ್ಯದಲ್ಲಿ ಆದಿವಾಸಿಗಳು ವಾಸ ಮಾಡುತ್ತಿದ್ದರು. ವನ್ಯಪ್ರಾಣಿಗಳ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ವನ್ಯಜೀವಿಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಅವುಗಳ ಜತೆ ಹೇಗೆ ವರ್ತಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ವಾಸನೆ ಸೇರಿದಂತೆ ಶಬ್ದದಿಂದಲೇ ಕಾಡುಪ್ರಾಣಿಗಳ ಸುಳಿವು ತಿಳಿದುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದರು. ಅದೇ ರೀತಿ ಕಾಡಂಚಿನ ಭಾಗದಲ್ಲಿ ವಾಸಿಸುವ ಜನ ಮುನ್ನಚ್ಚರಿಕೆ ವಹಿಸಬೇಕು. ಅರಣ್ಯ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬರ ಹೊಣೆಗಾರಿಕೆ ಕೂಡ ಹೌದು. ಅರಣ್ಯ ಇದ್ದರೆ ನಾವು, ನೀವು. ಇಲ್ಲದಿದ್ದರೆ ಅಸಮತೋಲನ ಉಂಟಾಗಿ ಅನಾಹುತ ಸಂಭವಿಸುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಭೂಮಿಪುತ್ರ ಸಿ.ಚಂದನ್‌ಗೌಡ ಮಾತನಾಡಿ, ಅವಳಿ ತಾಲೂಕಿನ ಜನ ಎದುರಿಸುತ್ತಿರುವ ಸಮಸ್ಯೆಗಳ ವಾಸ್ತವಾಂಶ ಗೊತ್ತಾಗಬೇಕಾದರೆ, ರಾಜ್ಯ ಸರ್ಕಾರ, ಕಾಡಂಚಿನ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಚರ್ಚಿಸಬೇಕು ಎಂದು ಮನವಿ ಮಾಡಿದರು.
ಹುಲಿ ದಾಳಿ ಬಳಿಕ ಹಳೆಹೆಗ್ಗೂಡಿಲು ಗ್ರಾಮದ ಜನರು ಭಯಭೀತರಾಗಿದ್ದಾರೆ. ಆವೇಶದಲ್ಲಿ ಸಣ್ಣ ತಪ್ಪು ಮಾಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ರೈತರನ್ನು ಕ್ಷಮಿಸಿ, ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸರ್ಕಾರ ಹಿಂಪಡೆಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಶಾಸಕರು, ಸಚಿವರು, ಸರ್ಕಾರದ ಮೇಲೆ ಒತ್ತಡ ಏರಿ, ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಹಿಂಪಡೆಯುವಂತೆ ಮಾಡಬೇಕು ಎಂದೂ ಮನವಿ ಮಾಡಿದರು.
ಮುಳುಗಡೆ ಪ್ರದೇಶದ ಇಲ್ಲಿನ ಜನ ಕಳೆದ 40-50 ವರ್ಷಗಳಿಂದಲೂ ಅರಣ್ಯ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ಸಾಗುವಳಿ ಪತ್ರ ಪಡೆಯಲು ಸಾಧ್ಯವಾಗಿಲ್ಲ. ಈಗಲಾದರೂ ಈ ಎರಡು ಇಲಾಖೆಗಳು, ಜಂಟಿ ಸರ್ವೇ ಕಾರ್ಯ ಕೈಬಿಟ್ಟು, ರೈತರಿಗೆ ಸಾಗುವಳಿ ಪತ್ರ ಕೊಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸರಗೂರು ವಲಯ ಅರಣ್ಯಾಧಿಕಾರಿ ಡಾ.ಲೋಕೇಶ್, ಹಾರ್ಟ್ ಸಂಸ್ಥೆ ಸಂಸ್ಥಾಪಕ ಶಿವಕುಮಾರ್, ಸಂಯೋಜಕ ಶಿವಲಿಂಗ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರದೀಪ್ ಕುಮಾರ್, ಅರ್ಪಿತಾ, ಯಜಮಾನರಾದ ಚುಂಚನಾಯಕ, ಗೋವಿಂದರಾಜು, ಭಲ್ಲೇಗೌಡ, ಗ್ರಾಪಂ ಮಾಜಿ ಸದಸ್ಯರಾದ ಮಹದೇವನಾಯಕ, ಸೋಮಣ್ಣ, ಗಡಿ ಯಜಮಾನರಾದ ಚೆನ್ನನಾಯಕ, ರೈತ ಕಲ್ಯಾಣ ಸಂಘದ ಸರಗೂರು ತಾಲೂಕು ಕಾರ್ಯದರ್ಶಿ ಬೈರಾನಾಯಕ, ಯುವ ರೈತ ಮುಖಂಡ ನವೀನ್ ಕುಮಾರ್, ಗ್ರಾಮಸ್ಥರಾದ ಎಚ್.ಎನ್. ಚೆನ್ನನಾಯಕ, ಎಚ್.ಎಂ.ಶಿವಪ್ಪ, ಸೋಮಣ್ಣ, ಶಂಕರ, ಸಿದ್ದಪ್ಪಾಜಿ, ಭೋಗಯ್ಯ, ಹನುಮಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net