ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಬರುವಂತಾಗಲಿ:ಪ್ರಾಧ್ಯಾಪಕ ಎಂ.ಚಂದ್ರಶೇಖರ್ ಆಶಯ
ನಗರ ಕೇಂದ್ರ ಗ್ರಂಥಾಲಯದಿಂದ ಪೀಪಲ್ಸ್ ಪಾರ್ಕ್‌ನ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಎಂ.ಚಂದ್ರಶೇಖರ್, ಅಂಶಿ ಪ್ರಸನ್ನಕುಮಾರ್, ಬಿ.ಮಂಜುನಾಥ್, ಜಿ.ಆನಂದ್, ರಾಖಿ ಚೆನ್ನಬಸವಣ್ಣ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗ್ರಂಥಾಲಯಗಳು ಜ್ಞಾನ ದೇಗುಲ ಇದ್ದಂತೆ. ಹಾಗಾಗಿ ಜನರು ದೇವಾಲಯಗಳಿಗೆ ಹೋಗುವಂತೆ ಗ್ರಂಥಾಲಯಗಳಿಗೆ ಹೋಗಬೇಕು
ಜ್ಞಾನಾರ್ಜನೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣ ಮಾಡಲು ಅನುಕೂಲವಾಗುತ್ತದೆ
ಮೈಸೂರು:
ದೇವಸ್ಥಾನ, ಗುಡಿಗಳಲ್ಲಿ ಭಕ್ತರು ತುಂಬಿ ತುಳುಕುವಂತೆ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕಬೇಕು ಎಂದು ಮಾನಸ ಗಂಗೋತ್ರಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ.ಚಂದ್ರಶೇಖರ್ ಹೇಳಿದರು.
ನಗರ ಕೇಂದ್ರ ಗ್ರಂಥಾಲಯದಿಂದ ಪೀಪಲ್ಸ್ ಪಾರ್ಕ್‌ನ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಗ್ರಂಥಾಲಯಗಳು ಜ್ಞಾನ ದೇಗುಲ ಇದ್ದಂತೆ. ಹಾಗಾಗಿ ಜನರು ದೇವಾಲಯಗಳಿಗೆ ಹೋಗುವಂತೆ ಗ್ರಂಥಾಲಯಗಳಿಗೆ ಹೋಗಬೇಕು. ಪ್ರತಿಯೊಬ್ಬರೂ ಗ್ರಂಥಾಲಯದ ಸದುಪಯೋಗ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಒಂದು ಪುಸ್ತಕ ನೂರು ಗೆಳೆಯರಿಗೆ ಸಮಾನ, ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ ಎಂಬುದು ಗ್ರಂಥಾಲಯದ ಪಿತಾಮಹ ಎಸ್.ಆರ್. ರಂಗನಾಥನ್ ಅವರ ನಂಬಿಕೆಯಾಗಿತ್ತು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುವುದರಿಂದ ಜ್ಞಾನಾರ್ಜನೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತೀರ್ಣ ಮಾಡಲು ಅನುಕೂಲವಾಗುತ್ತದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಪಠ್ಯದ ಜತೆಗೆ ಸಾಹಿತ್ಯ ಹಾಗೂ ಪತ್ರಿಕೆಗಳನ್ನು ಓದಿ ಎಂದು ಸಲಹೆ ಮಾಡಿದರು.
ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಬಿ.ಮಂಜುನಾಥ್, ಶಾರದಾವಿಲಾಸ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ, ಪೀಪಲ್ಸ್ ಪಾರ್ಕ್ ಶಾಖಾ ಗ್ರಂಥಾಲಯ ಸಮಿತಿ ಸದಸ್ಯ ಜಿ.ಆನಂದ್, ರಾಖಿ ಚೆನ್ನಬಸವಣ್ಣ, ಅಧ್ಯಕ್ಷತೆ ವಹಿಸಿದ್ದ ಪೀಪಲ್ಸ್ ಪಾರ್ಕ್ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಡಾ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಸುಮಾ ಬಿ.ಕೋಡಿಹಳ್ಳಿ, ಮುಖ್ಯ ಗ್ರಂಥಾಲಯಾಧಿಕಾರಿ ಟಿ.ಪದ್ಮಶ್ರೀ ಇದ್ದರು.
ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಗ್ರಂಥಾಲಯ ಸಹಾಯಕಿ ಎಂ.ಎಸ್.ಚಿತ್ರಾ, ಸಹಾಯಕ ಎಚ್.ವಿ.ರಮೇಶ್, ಗ್ರಂಥಪಾಲಕ ಪಿ.ಯತಿರಾಜು, ಸಹಾಯಕಿ ಎಂ.ಕುಸುಮಾ, ಸಹಾಯಕ ಗ್ರಂಥ ಪಾಲಕಿ ಎಸ್.ಸೌಮ್ಯಾ, ಸೈಯದ ನೂರುಸ್ಸಭಾ ಸಾಲಾರ್, ಕಚೇರಿಯ ಅಧೀಕ್ಷಕಿ ಎಚ್.ಲತಾ, ಪ್ರಥಮ ದರ್ಜೆ ಸಹಾಯಕಿ ಎಲ್.ಶೋಭಾ ಇತರರು ಇದ್ದರು.