ಎಐ ಕಾಲದಲ್ಲಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ಮತ್ತಷ್ಟು ಗಟ್ಟಿಗೊಳ್ಳಲಿ

 ವಿಟಿಯು ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಯುಕ್ತಿ 2ಕೆ26 ಸಾಂಸ್ಕೃತಿಕ ಕಾರ್ಯಕ್ರಮ’ ಗಣ್ಯರು ಉದ್ಘಾಟಿಸಿದರು. ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ನಟ ಶರಣ್, ನಟಿಯರಾದ ಧನ್ಯಾ ರಾಮಕುಮಾರ್, ಸೋನಾಲ್ ಮೊಂಥೆರೋ, ಡಾ.ಎಚ್.ಎಂ. ನಂಜುಂಡಸ್ವಾಮಿ, ಡಾ.ಎಂ.ಎಸ್. ಶಿವಕುಮಾರ್ ಇದ್ದರು.
ವಿಟಿಯು ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಯುಕ್ತಿ 2ಕೆ26 ಸಾಂಸ್ಕೃತಿಕ ಕಾರ್ಯಕ್ರಮ’ ಗಣ್ಯರು ಉದ್ಘಾಟಿಸಿದರು. ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ನಟ ಶರಣ್, ನಟಿಯರಾದ ಧನ್ಯಾ ರಾಮಕುಮಾರ್, ಸೋನಾಲ್ ಮೊಂಥೆರೋ, ಡಾ.ಎಚ್.ಎಂ. ನಂಜುಂಡಸ್ವಾಮಿ, ಡಾ.ಎಂ.ಎಸ್. ಶಿವಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಸಲಹೆ
  • ‘ಯುಕ್ತಿ 2ಕೆ26 ಸಾಂಸ್ಕೃತಿಕ ಕಾರ್ಯಕ್ರಮ
ಮೈಸೂರು: ಐಟಿ ಉದ್ಯೋಗಗಳನೆಲ್ಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಕ್ರಮಿಸಿಕೊಳ್ಳುತ್ತಿರುವ ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ ಎಂದು ಸರ್ ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಮೈಸೂರು ಪ್ರಾದೇಶಿಕ ಕಚೇರಿಯಿಂದ ಮೈಸೂರು ವಿಟಿಯು ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಯುಕ್ತಿ 2ಕೆ26 ಸಾಂಸ್ಕೃತಿಕ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.
ಸಾಫ್ಟ್‌ವೇರ್ ವಲಯದಲ್ಲಿ ಬಹುತೇಕ ಪಾಲು ಉದ್ಯೋಗಗಳು ಎಐ ಪಾಲಾಗುತ್ತಿವೆ. 2030 ರ ವೇಳೆಗೆ ಇಡೀ ಸಾಫ್ಟ್‌ವೇರ್ ಕ್ಷೇತ್ರ ಎಐ ಮೇಲೆ ಅವಲಂಬಿತವಾಗಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಈಗಾಗಲೇ ಹಲವಾರು ಹೆಸರಾಂತ ಉದ್ಯಮಿಗಳು ಹೇಳುತ್ತಿದ್ದಾರೆ. ಹಾಗಾಗಿ, ಅದಕ್ಕೆ ಸರಿಸಮನಾಗಿ ನಮ್ಮ ವಿದ್ಯಾರ್ಥಿಗಳು ಸೂಕ್ತ ತರಬೇತಿಯೊಂದಿಗೆ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ನಾನು ಕುಲಪತಿಯಾದ ಬಳಿಕ ನಮ್ಮ ವಿವಿಯ ಪ್ರವೇಶಾತಿ ಸಂಖ್ಯೆ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಅಲ್ಲದೇ ಕಾಲೇಜಿನ ಪ್ರವೇಶಾತಿ ಶುಲ್ಕ ಭರಿಸಲಾಗದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿವಿಯಿಂದಲೇ ಹೊಸದಾಗಿ ವಿದ್ಯಾನಿಧಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಈ ನಿಧಿಯಿಂದ 60 ಲಕ್ಷ ರೂ. ಸಂಗ್ರಹವಾಗಿದೆ. ಇದನ್ನು ಮತ್ತಷ್ಟು ಹೆಚ್ಚಿಸಲು ಶ್ರಮವಹಿಸಲಾಗುವುದು. ಇದನ್ನು ಬಡ ವಿದ್ಯಾರ್ಥಿಗಳ ಶುಲ್ಕ ಭರಿಸಲು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆಯಿರಬಾರದೆಂದು 2024 ರಿಂದ ಯುಕ್ತಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಇದಕ್ಕೆಂದೇ ನಾಲ್ಕು ಕೇಂದ್ರಗಳಿಗೆ 2.5 ಕೋಟಿ ರೂ. ಮುಂಗಡ ಮೀಸಲಿಡಲಾಗಿದೆ. ಸಾಂಸ್ಕೃತಿಕ ಹಬ್ಬದ ಜತಗೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು. 2500 ವಿದ್ಯಾರ್ಥಿಗಳು ತಮ್ಮ ಪದವಿ ಪೂರೈಸಿ ವಿವಿಯಿಂದ ಹೊರಬರುವ ವೇಳೆಗೆ ಎಲ್ಲರೂ ಉದ್ಯೋಗಿಗಳಾಗಿ ಹೊರಬರಬೇಕು ಎಂದು ಹೇಳಿದರು.
ನಟ ಶರಣ್ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಪಠ್ಯದ ಜತೆ , ಸಾಂಸ್ಕೃತಿಕ ಕಾರ್ಯಕ್ರಮ ಕ್ರೀಡೆಗೆ ಅವಕಾಶ ನೀಡುವುದು ವಿಶೇಷ ಹಾಗೂ ಅತ್ಯವಶ್ಯಕ. ಈ ಸಾಲಿನಲ್ಲಿ ವಿಟಿಯು ಸದಾ ಮುಂದಿದೆ. ನಿಜವಾದ ಕಲಾವಿದರು ಶಾಲೆಯ ವೇದಿಕೆಯಲ್ಲೇ ಉದಯಿಸುತ್ತಾರೆ. ನಾನು ಕೂಡ ನನ್ನ ಶಾಲೆಯ ವೇದಿಕೆಯಲ್ಲಿ ನಾಟಕ ಅಭಿನಯಿಸುವ ಮೂಲಕ ಕಲಾವಿದನಾಗಿ ಬೆಳಕಿಗೆ ಬಂದೆ ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ನಟಿ ಧನ್ಯಾರಾಮ್‌ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಕಾಲೇಜು ದಿನಗಳನ್ನು ಸಂಭ್ರಮಿಸುವುದರ ಜತೆಗೆ ಭವಿಷ್ಯ ರೂಪಿಸಿಕೊಳ್ಳಿ. ಕಾಲೇಜಿನ ದಿನಗಳಲ್ಲಿ ಸರಿಯಾದ ಮಾರ್ಗ ಅನುಸರಿಸಿದರೆ ಅತ್ಯುತ್ತಮ ಸ್ಥಾನಕ್ಕೆ ಏರಬಹುದು ಎಂದರು.
ನಟಿ ಸೋನಾಲ್ ಮೊಂಥೆರೋ ಮಾತನಾಡಿ, ಗುರುಗಳು, ಪಾಲಕರಿಗೆ ಗೌರವ ನೀಡುವುದನ್ನು ಶಾಲಾ ದಿನಗಳಿಂದಲೇ ಕಲಿಯಬೇಕು. ಇಂತಹ ಕಾಲೇಜುಗಳಲ್ಲಿ ಓದುವಾಗ ಆಕರ್ಷಣೆ ಸರ್ವೇ ಸಾಮಾನ್ಯವಾಗಿರುತ್ತದೆ. ಅಂತಹ ಆಕರ್ಷಣೆ ಹಾಗೂ ಟಾಕ್ಸಿಕ್ ಸಂಬಂಧಗಳಿಗೆ ಆಕರ್ಷಿತರಾಗದೆ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು. ಆಗ ಒಳ್ಳೆಯ ಹಾಗೂ ಮೌಲ್ಯಯುತ ಜೀವನ ನಮ್ಮದಾಗುತ್ತದೆ ಎಂದರು.
ವಿಟಿಯು ಮೈಸೂರು ಪ್ರಾದೇಶಿಕ ನಿರ್ದೇಶಕ ಡಾ.ಎಚ್.ಎಂ. ನಂಜುಂಡಸ್ವಾಮಿ, ವಿಟಿಯು ಇಸಿ ಸದಸ್ಯ ಡಾ.ಎಂ.ಎಸ್. ಶಿವಕುಮಾರ್, ಯುಕ್ತಿ ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಎನ್. ತಿಮ್ಮರಾಜು, ಸಹ ಪ್ರಾಧ್ಯಾಪಕ ಪ್ರಸನ್ನಕುಮಾರ್ ಇತರರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳು ಮುಂದುವರೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net